ಯಕ್ಷಗಾನದಿಂದ ಮನಸಿಗೆ ರಂಜನೆ-ಸಂಸ್ಕಾರ

17sdp5
Published on

ಸಿದ್ದಾಪುರ: ಗಾಯನ-ವಾದನ, ನರ್ತನ, ಅರ್ಥಗಾರಿಕೆಗಳ ಮೂಲಕ ಪಂಡಿತರಿಗೂ- ಪಾಮರರಿಗೂ ಏಕಕಾಲದಲ್ಲಿ ಸಂತೋಷ ನೀಡುವ ಯಕ್ಷಗಾನ ಸಮಷ್ಟಿ ಕಲೆಯಾಗಿದ್ದು, ದಿವ್ಯ ಪುರುಷರ ಆದರ್ಶಗಳನ್ನು ಅಭಿವ್ಯಕ್ತಿಸುವ ಮೂಲಕ ಮನಸಿಗೆ ರಂಜನೆ ಜತೆಗೆ ಸಂಸ್ಕಾರವನ್ನು ನೀಡುತ್ತದೆ ಎಂದು ನಾಟ್ಯಾಚಾರ್ಯ ಶಂಕರ ಭಟ್ಟ ಹೇಳಿದರು.

ಪಟ್ಟಣದ ಹೊಸೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೊಮ್ಮೇಶ್ವರ ಕಲಾಬಳಗ ಏರ್ಪಡಿಸಿದ ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು.

ವಿದ್ಯಾರ್ಥಿಗಳು ಕಲಿಕೆಯ ನಿರಂತರತೆ ಕಾಯ್ದುಕೊಂಡು ಉತ್ತಮ ಕಲಾವಿದರಾಗುವಂತೆ ತಿಳಿಸಿದರು.

ಬನವಾಸಿ ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲ ಎಂ.ಕೆ. ನಾಯ್ಕ ಅವರು ವಿದ್ಯಾರ್ಥಿಗಳಲ್ಲಿ ಕಲೆಯ ಜಾಗೃತಿ ಮತ್ತು ಪಾಲಕರ ಪ್ರೋತ್ಸಾಹದ ಕುರಿತು ವಿವರಿಸಿದರು. ಖ್ಯಾತ ಯಕ್ಷಗಾನ ಕಲಾವಿದ ಅಶೋಕ ಭಟ್ಟ ಸಿದ್ದಾಪುರ ಮಾತನಾಡಿ, ಈ ನಾಡಿನ ಮಣ್ಣಿನ ಕಲೆಯನ್ನು ಅಭ್ಯಸಿಸಿ, ಉಳಿಸಿ-ಬೆಳೆಸುವಂತೆ ಕರೆ ನೀಡಿದರು.

ಶಾಲಾ ಎಸ್​ಡಿಎಂಸಿ ಅಧ್ಯಕ್ಷ ಮಂಜುನಾಥ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹೊಸೂರಿನ ಸಂಕಲ್ಪ ಸೇವಾ ಟ್ರಸ್ಟ್​ನ ಮುಖ್ಯಸ್ಥ ಪಿ.ಬಿ. ಹೊಸೂರ, ತರಬೇತುದಾರ, ಹವ್ಯಾಸಿ ಕಲಾವಿದ ಜೈಕುಮಾರ ನಾಯ್ಕ ಮಾತನಾಡಿದರು. ನಾಗರಾಜ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಕಲಾ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹೆಜ್ಜೆ ಕಲಿಸುವ ಮೂಲಕ ಕಲಿಕೆಗೆ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net