

ಉಡುಪಿ; ಯಕ್ಷಗಾನದ ಭಾಗವತಿಕೆ ಕಲೆಯ ಉಳಿವಿಗೆ ಯುವ ಸಮುದಾಯ ಪಾಲ್ಗೊಳ್ಳುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿ, ಅವರಲ್ಲಿ ಆಸಕ್ತಿ ಬೆಳೆಯುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಉತ್ತಮ ಭಾಗವತರು ರೂಪುಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಕರೆ ನೀಡಿದರು.
ಉಡುಪಿಯ ಯಕ್ಷಗಾನ ಕೇಂದ್ರ ಇಂದ್ರಾಳಿ(ಮಾಹೆ), ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ(ಮಾಹೆ) ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ "ಬಡಗುತಿಟ್ಟು ಯಕ್ಷಗಾನ ಭಾಗವತಿಕೆಯ ವಿವಿಧ ಶೈಲಿ, ಮಟ್ಟುಗಳ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಈ ಕಲೆಯನ್ನು ವರ್ಗಾಯಿಸುವ ಕೆಲಸವನ್ನು ಅನೇಕರು ಉತ್ತಮವಾಗಿಯೇ ಮಾಡುತ್ತಿದ್ದು, ಆ ಕಾರ್ಯ ನಿರಂತರವಾಗಿರಲಿ. ಯಕ್ಷ ಗುರುಗಳಾದವರು ಉತ್ತಮವಾದ ಹಾಗೂ ಗಮನ ಸೆಳೆಯುವ ಶಾಸ್ತ್ರೀಯ ಶೈಲಿಯ ಯುವ ಭಾಗವತರನ್ನು ರೂಪಿಸಬೇಕು ಎಂದರು.
ಕಾರ್ಕಳ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಶಿವಾನಂದ ಪೈ ಮಾತನಾಡಿ, ಯಕ್ಷಗಾನ ಜಾನಪದ ಕಲೆಯಲ್ಲ. ಅದು ಶಾಸ್ತ್ರೀಯ ಕಲೆ. ಭಗವಂತನ ಮಹಿಮೆಯನ್ನು ಹಾಡುವವರಿಗೆ ಭಾಗವತ ಎನ್ನುತ್ತಾರೆ. ಯಕ್ಷರಂಗದಲ್ಲಿ ಭಾಗವತನೇ ಮೊದಲ ಕಲಾವಿದ. ಆತ ಪ್ರಸಂಗದ ಚೌಕಟ್ಟುಗಳನ್ನು ಮೀರದ ಹಾಗೆ ಕಲಾವಿದರಿಗೆ ನಿರ್ದೇಶನ ಮಾಡುತ್ತಾನೆ. ಪ್ರೇಕ್ಷಕರಿಗೆ ಪುರಾಣ ಜ್ಞಾನ ನೀಡುವುದರ ಜತೆಗೆ ಮನರಂಜನೆ ನೀಡಲು ಕೆಲ ಭಾಗವತರು ವಿವಿಧ ಶೈಲಿ ಅಳವಡಿಸಿಕೊಂಡಿದ್ದಾರೆ ಎಂದರು.
ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆಗಾಗಿ ಅಥವಾ ರಂಗದಲ್ಲಿ ತನ್ನ ಛಾಪು ಮೂಡಿಸಲು ಕೆಲ ಭಾಗವತರು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಭಾಗವತಿಕೆಯ ಶೈಲಿ ಹಾಗೂ ಮಟ್ಟು ಮುರಿದು, ಪುನಾರಾವರ್ತನೆ ಮಾಡುತ್ತಿದ್ದಾರೆ. ಇದು ತಪ್ಪು ಎಂದಲ್ಲ. "ಗಳಿಸು, ಉಳಿಸು, ಬೆಳೆಸು' ಎಂಬ ಮೂರು ಪ್ರಕ್ರಿಯೆಯನ್ನು ಈ ಕಲೆಯ ಉಳಿವಿಗೆ ಅಳವಡಿಸಿಕೊಳ್ಳಬೇಕು. ಸಂಪ್ರದಾಯ, ಶಾಸ್ತ್ರಬದ್ಧವಾದ ಗಾಯನ ಶೈಲಿಯನ್ನೇ ಶಿಷ್ಯರಿಗೆ ಕಲಿಸಿ ಎಂದು ಶಿವಾನಂದ ಪೈ ಸಲಹೆ ನೀಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷಿ$್ಮನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಭಾಗವತ, ಯಕ್ಷಗಾನ ಗುರು ಹೆರಂಜಾಲು ಗೋಪಾಲ ಗಾಣಿಗ, ಯಕ್ಷಗಾನ ಮೇಳಗಳ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.
ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಸದಸ್ಯ ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ್ ಸುವರ್ಣ ಯಕ್ಷಗಾನ ಶೈಲಿಯಲ್ಲಿಯೇ ಪ್ರಾರ್ಥಿಸಿದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.