

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕಲಾವಿದರ ಪರಿಚಯಾತ್ಮಕ ವಿವರಗಳನ್ನು ಒಳಗೊಂಡ ಯಕ್ಷಗಾನ ದತ್ತಾಂಶ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.
ಭಾನುವಾರ ಎಂಜಿಎಂ ಕಾಲೇಜು ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ವತಿಯಿಂದ ನಡೆದ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಅವರು ಮಾತಾಡಿದರು.
ಭಾರತೀಯ ಸಂಸ್ಕೃತಿ ಮತ್ತು ವಿಚಾರಧಾರೆಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಯಕ್ಷಗಾನ ಸಮ್ಮೇಳನವು ಇದರ ಭಾಗವಾಗಿದೆ. 4 ಮಂದಿ ಯಕ್ಷಗಾನ ಕಲಾವಿದರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಯಕ್ಷಗಾನಕ್ಕೆ ಪ್ರತ್ಯೇಕ ಸಮ್ಮೇಳನ ಆಯೋಜಿಸುವ ಮೂಲಕ ಹೊಸ ಪರಂಪರೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ವಿಶ್ವ ಯಕ್ಷಗಾನ ಸಮ್ಮೇಳನಕ್ಕೂ ಸಹಕಾರ ನೀಡಲಾಗುವುದು. ಸಮ್ಮೇಳನದ ನಿರ್ಣಯಗಳನ್ನು ಜಾರಿಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಹೇಳಿದರು.
ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಮೇಲ್ಮಟ್ಟದಲ್ಲಿದ್ದು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆಗೆ ಇದೆ. ವಾಣಿಜ್ಯ ದೃಷ್ಟಿಯಿಂದ ಯಕ್ಷಗಾನದಲ್ಲಿ ಅನೇಕ ಪರಿಷ್ಕರಣಿಗಳು ನಡೆಯುತ್ತಿದ್ದು ಗುಣಮಟ್ಟ ಕೆಳಗಿರುವತ್ತಿರುವುದು ಕೇದಕರ ಸಂಗತಿ. ಯಕ್ಷಗಾನ ಅಕಾಡೆಮಿ ಈ ಬಗ್ಗೆ ಗಮನಹರಿಸಿ ನಿಯಂತ್ರಿಸಿದರೆ ಮೂಲ ಸ್ವರೂಪ ಉಳಿದುಕೊಳ್ಳಲು ಸಾಧ್ಯವಿದೆ. ಕಾಸರಗೋಡಿನಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸಿದರೆ ಸಹಕಾರ ನೀಡಲಾಗುವುದು. ಜಿಲ್ಲಾ ಮಟ್ಟದ ಯಕ್ಷಗಾನ ಸಮ್ಮೇಳನ ಸ್ಥಳೀಯ ಕಲಾವಿದರಿಗೆ ಪ್ರಯೋಜನವಾಗಲಿದೆ ಎಂದರು.
ಸಮ್ಮೇಳನ ಅಧ್ಯಕ್ಷ ಡಾ ಪ್ರಭಾಕರ ಜೋಶಿ ಮಾತನಾಡಿ, ಅನೇಕ ದೇವಸ್ಥಾನಗಳು ಯಕ್ಷಗಾನ ಕಲೆಯನ್ನು ಆದಾಯದ ಮೂಲವಾಗಿ ಪರಿಗಣಿಸಿವೆ. ಜೊತೆಗೆ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ವರ್ಷದಲ್ಲಿ ಕಲಾ ನೀತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಶಾಸಕ ರಘುಪತಿ ಭಟ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವಾ,
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಗಾನ ರಂಗದ ಅಧ್ಯಕ್ಷ ಗಂಗಾಧರ ರಾವ್, ಆಡಳಿತಾಧಿಕಾರಿ ಡಾ. ಜಗದೀಶ್ ಶೆಟ್ಟಿ, , ಸಮ್ಮೇಳನ ಸಮಿತಿಯ ಸದಸ್ಯರಾದ ಸುರೇಂದ್ರ ಪಣಿಯೂರು, ಕದ್ರಿ ನವನಿತ ಶೆಟ್ಟಿ, ಸುರೇಂದ್ರ ಪಣಿಯೂರು , ಭುವನ ಪ್ರಸಾದ್ ಹೆಗ್ಡೆ, ಸತೀಶ್ ಶೆಟ್ಟಿ ಪಟ್ಲ , ಕೆ. ಎಂ. ಶೇಖರ್, ಯಕ್ಷಗಾನ ಅಕಾಡೆಮಿಯ ಆಡಳಿತಾಧಿಕಾರಿ ಅಶೋಕ್ ಎನ್ ಛಲವಾದಿ, ರಿಜಿಸ್ಟಾçರ್ ಶಿವರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ , ಸಮ್ಮೇಳನದ ಪ್ರಧಾನ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್. ಹೆಗಡೆ ಸ್ವಾಗತಿಸಿದರು. ಮುರಳಿ ಕಡೆಕಾರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಮ್ಮೇಳನ ಅಧ್ಯಕ್ಷ ಡಾ ಪ್ರಭಾಕರ ಜೋಶಿ ಹಾಗೂ ಪತ್ನಿ ಸುಜಾತ ಪ್ರಭಾಕರ ಜೋಶಿ ಅವರಿಗೆ ಬೆಳ್ಳಿಯ ಯಕ್ಷಗಾನ ಕಿರೀಟ ಹೊಂದಿರುವ ಕೃಷ್ಣನ ಪಂಚಲೋಹದ ವಿಗ್ರಹ ನೀಡಿ ಗೌರವಿಸಲಾಯಿತು. ಕಾರ್ಯಾಧ್ಯಕ್ಷ ಡಾ.ಜಿ.ಎಲ್. ಹೆಗಡೆ ದಂಪತಿಯನ್ನು ಸನ್ಮಾನಿಸಲಾಯಿತು.
ಸಮ್ಮೇಳನ ನಿರ್ಣಯಗಳು
ಎಂಜಿಎಂ ಮೈದಾನದಲ್ಲಿ ನಡೆದ ಪ್ರಥಮ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದಲ್ಲಿ ಒಟ್ಟು 13 ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಸಮ್ಮೇಳನ ನಡೆಸಲು ಸಮಿತಿ ತೀರ್ಮಾನಿಸಿದೆ.