ಹೊಸತನಕ್ಕೆ ತೆರೆದುಕೊಳ್ಳುತ್ತಿದೆ ಯಕ್ಷಗಾನ

yakshagana new
Published on

ಮೋಹನದಾಸ್ ಮರಕಡ, ಮಂಗಳೂರು

ಕೋವಿಡ್ -19ನಿಂದಾಗಿ ಕಳೆದ ಋತುವಿನಲ್ಲಿ ಮಾರ್ಚ್ ತಿಂಗಳ ಅರ್ಧದಲ್ಲೇ ಮೊಟಕುಗೊಂಡಿದ್ದ ಯಕ್ಷಗಾನ ಪ್ರದರ್ಶನಕ್ಕೆ ಮರುಚಾಲನೆ ದೊರೆತಿದೆ. ಈ ಬಾರಿ ಆನ್‌ಲೈನ್ ವೇದಿಕೆಗಳಿಗೂ ಯಕ್ಷಗಾನ ವಿಸ್ತರಿಸಿರುವುದು ವಿಶೇಷ.

ಕೋವಿಡ್ ಆತಂಕದ ನಡುವೆಯೇ ಮೇಳಗಳು ಪೌರಾಣಿಕ, ಕಾಲ್ಪನಿಕ ಹೊಸ ಪ್ರಸಂಗಗಳನ್ನು ರೂಪಿಸಿದ್ದು, ಕಲಾವಿದರು, ವೇಷಭೂಷಣ, ರಂಗಸ್ಥಳಗಳು ತಿರುಗಾಟಕ್ಕೆ ಸಜ್ಜಾಗಿವೆ. ದ.ಕ, ಉಡುಪಿ, ಉ.ಕ. ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ 40ಕ್ಕೂ ಅಧಿಕ ಮೇಳಗಳು ಆರು ತಿಂಗಳ ಕಾಲ ತಿರುಗಾಟಕ್ಕೆ ಅಣಿಯಾಗಿವೆ.

ತೆಂಕುತಿಟ್ಟಿನ ಹೊಸ ಮೇಳ ಪಟ್ಲ ಸತೀಶ ಶೆಟ್ಟಿ ಸಂಚಾಲಕತ್ವದ ‘ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ’ ನ.27ರಿಂದ ಪ್ರದರ್ಶನ ನೀಡುತ್ತಿದೆ. ಪತ್ತನಾಜೆ ತನಕವೂ ಈ ಮೇಳದ ಆಟ ಭರ್ತಿಯಾಗಿದೆ. ಇತರ ಮೇಳಗಳೂ ಸಿದ್ಧತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚೆಂಡೆ -ಮದ್ದಳೆಯ ಝೇಂಕಾರ ಕೇಳಿ ಬರಲಿದೆ.

ಲೈವ್‌ನಲ್ಲೇ ಸಾವಿರ ವೀಕ್ಷಕರು: ಯಕ್ಷಗಾನ ಮೇಳಗಳು, ಕಲಾವಿದರು ಹೊಸತನಕ್ಕೆ ತೆರೆದುಕೊಂಡಿದ್ದು, ಫೇಸ್‌ಬುಕ್, ವಾಟ್ಸಾೃಪ್ ಲೈವ್‌ಗಳು ಯಕ್ಷಗಾನ ಪ್ರಸರಣಕ್ಕೆ ಹೊಸ ವೇದಿಕೆ ಒದಗಿಸುತ್ತಿರುವುದು ಈ ಬಾರಿಯ ವಿಶೇಷ. ಸದ್ಯ ಧರ್ಮಸ್ಥಳ, ಮಂದಾರ್ತಿ ಹಾಗೂ ಪಾವಂಜೆ ಮೇಳದ ಆಟ ಫೇಸ್‌ಬುಕ್, ವಾಟ್ಸಾೃಪ್‌ನಲ್ಲಿ ನೇರಪ್ರಸಾರ ಕಾಣುತ್ತಿದ್ದು, ದಿನಕ್ಕೆ ಸಾವಿರಕ್ಕೂ ಅಧಿಕ ವೀಕ್ಷಕರು ನೋಡುತ್ತಿದ್ದಾರೆ. ಮೊಬೈಲ್‌ನಲ್ಲಿ ಮನೆಯಲ್ಲೇ ಕುಳಿತು ಆಟ ನೋಡುವ ಈ ಹೊಸ ವಿಧಾನ ಕೋವಿಡ್ -19 ಆತಂಕದ ಮಧ್ಯೆ ಹೊಸ ಬದಲಾವಣೆ.

ಯಾವ ಮೇಳ ತಿರುಗಾಟ ಯಾವಾಗ?

ಧರ್ಮಸ್ಥಳ ಮೇಳದ ಸೇವೆಯಾಟ ಆರಂಭವಾಗಿದ್ದು, ಸದ್ಯ ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬಪ್ಪನಾಡು ಮೇಳ ಡಿ.1ರಿಂದ ತಿರುಗಾಟ ಆರಂಭಿಸಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಡಿ.9ರಂದು ಸೇವೆಯಾಟದೊಂದಿಗೆ ಈ ಬಾರಿಯ ತಿರುಗಾಟ ಆರಂಭಿಸಲಿವೆ. ಹನುಮಗಿರಿ ಮೇಳ ಡಿ.28, ಸಸಿಹಿತ್ಲು ಭಗವತಿ ಮೇಳ ಡಿ.17, ದೇಂತಡ್ಕ ಮೇಳ ಡಿ.4, ಸುಂಕದಕಟ್ಟೆ ಡಿ.4ರಂದು ಯಕ್ಷಗಾನ ತಿರುಗಾಟ ಆರಂಭಿಸಲಿವೆ.

ಬಡಗಿನ ಮಂದಾರ್ತಿಯ ಐದು ಮೇಳಗಳ ಕಲಾವಿದರು ನಿಗದಿಯಂತೆ ಎರಡು ಮೇಳವಾಗಿ ಸದ್ಯ ಕ್ಷೇತ್ರದಲ್ಲೇ ಹರಕೆ ಆಟ ಪ್ರದರ್ಶಿಸುತ್ತಿದ್ದಾರೆ. ಹಾಲಾಡಿ ಮೇಳ ಡಿ.18, ಮಾರಣಕಟ್ಟೆ ಮೇಳ ಡಿ.5ರಂದು ಹೊರಡಲಿದೆ ಎಂದು ಮೇಳದ ಯಜಮಾನ ಕರುಣಾಕರ ಶೆಟ್ಟಿ ಮಾಹಿತಿ ನೀಡಿದ್ದಾರೆ. ಪಳ್ಳಿ ಕಿಶನ್ ಹೆಗ್ಡೆ ಯಜಮಾನಿಕೆಯ ಸೌಕೂರು ಮೇಳ ಡಿ.18ರಿಂದ, ಹಿರಿಯಡ್ಕ ಮೇಳ ಜನವರಿ ಮೊದಲ ವಾರ, ಮಡಾಮಕ್ಕಿ ಮೇಳ ಜನವರಿಯಲ್ಲಿ ಪ್ರದರ್ಶನ ಆರಂಭಿಸಲಿದೆ.

ಟೆಂಟ್ ಮೇಳಗಳು: ತೆಂಕಿನಲ್ಲಿ ಯಾವುದೇ ಟೆಂಟ್ ಮೇಳಗಳಿಲ್ಲ. ಬಡಗಿನಲ್ಲಿ ಎರಡು ಇವೆ. ಈ ಪೈಕಿ ಪೆರ್ಡೂರು ಮೇಳ ಜ.14ರಂದು ತಿರುಗಾಟ ಆರಂಭಿಸಲಿದೆ ಎಂದು ಮೇಳದ ಯಜಮಾನ ಕರುಣಾಕರ ಶೆಟ್ಟಿ ಮಾಹಿತಿ ನೀಡಿದ್ದಾರೆ. ಸಾಲಿಗ್ರಾಮ ಯಕ್ಷಗಾನ ಮಂಡಳಿ ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಜನವರಿಯಲ್ಲಿ ಪ್ರದರ್ಶನಕ್ಕೆ ಹೊರಡಲಿದೆ ಎಂದು ಮೇಳದ ಯಜಮಾನ ಪಿ.ಕಿಶನ್ ಹೆಗ್ಡೆ ಮಾಹಿತಿ ನೀಡಿದ್ದಾರೆ.

ಅರುವ ಮತ್ತೆ ಬಪ್ಪನಾಡು ಮೇಳಕ್ಕೆ

ತೆಂಕುತಿಟ್ಟಿನ ಹಿರಿಯ ಸ್ಟಾರ್ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಈ ಬಾರಿ ಮತ್ತೆ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಲಿದ್ದಾರೆ. ಹಲವು ವರ್ಷಗಳಿಂದ ಬಪ್ಪನಾಡು ಮೇಳದಲ್ಲಿದ್ದ ಅವರು ಕಳೆದ ವರ್ಷ ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಸುಂಕದಕಟ್ಟೆ ಮೇಳಕ್ಕೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ ರಮೇಶ್ ಆಚಾರ್ಯ ಮತ್ತು ಹಿರಿಯ ಕಲಾವಿದ ಹನುಮಗಿರಿ ಮೇಳದಲ್ಲಿದ್ದ ಶಿವರಾಮ ಜೋಗಿ ಬಿ.ಸಿ ರೋಡ್ ಸೇರ್ಪಡೆಯಾಗಲಿದ್ದಾರೆ.

ರಮೇಶ್ ಭಟ್ರು ಮತ್ತೆ ದೇವಿ?

ಕಟೀಲು ಮೇಳದ ಕೆಲವು ಕಲಾವಿದರು ಪಾವಂಜೆ ಮೇಳಕ್ಕೆ ಸೇರ್ಪಡೆಯಾಗಿರುವ ಕಾರಣ ಕಟೀಲು ಮೇಳದಲ್ಲಿ ಒಂದಷ್ಟು ಬದಲಾವಣೆ ಆಗಲಿದೆ. ದೇವಿ ಭಟ್ರು ಎಂದೇ ಖ್ಯಾತರಾಗಿದ್ದ ಸರವು ರಮೇಶ್ ಭಟ್ ಈ ಬಾರಿ ಮತ್ತೆ ದೇವಿ ಪಾತ್ರಕ್ಕೆ ಹಿಂದಿರುಗುವ ಸಾಧ್ಯತೆಗಳಿವೆ. ಅವರು ಎರಡು ವರ್ಷಗಳಿಂದ ಪುರುಷ ವೇಷ ಮಾಡುತ್ತಿದ್ದು, ದೇವಿ ಮಹಾತ್ಮೆಯಲ್ಲಿ ರಕ್ತಬೀಜ ಪಾತ್ರಧಾರಿಯಾಗಿದ್ದರು. ನಾಲ್ಕನೇ ಮೇಳದಲ್ಲಿ ಪ್ರಧಾನ ಸ್ತ್ರೀ ವೇಷಧಾರಿಯಾಗಿದ್ದ ಮನೋಹರ ರೈ ಬೆಳ್ಳಾರೆ ಮತ್ತು ಮೂರನೇ ಮೇಳದ ಪ್ರಧಾನ ಭಾಗವತ ಗೋಪಾಲಕೃಷ್ಣ ಮಯ್ಯರು ಈ ಬಾರಿ ವೈಯಕ್ತಿಕ ಕಾರಣದಿಂದ ಗೈರುಹಾಜರಾಗಲಿದ್ದಾರೆ. ಧರ್ಮಸ್ಥಳ ಮೇಳದಲ್ಲಿದ್ದ ತಾರಾನಾಥ ಬಲ್ಯಾಯ ವರ್ಕಾಡಿ ಕಟೀಲು ಮೇಳಕ್ಕೆ ಬರಲಿದ್ದಾರೆ.

ಕಾಲಮಿತಿ ಆಟ ಹೆಚ್ಚಳ: ಕೋವಿಡ್ ಸಹಿತ ಹಲವು ಕಾರಣಗಳಿಂದ ಈ ಬಾರಿ ತೆಂಕಿನ ಕೆಲವು ಮೇಳಗಳು ಕಾಲಮಿತಿ ಪ್ರದರ್ಶನಕ್ಕೆ ಒಗ್ಗಿಕೊಳ್ಳುತ್ತಿವೆ. ಧರ್ಮಸ್ಥಳ, ಹನುಮಗಿರಿ ಹಿಂದೆಯೇ ಕಾಲಮಿತಿ ಪ್ರದರ್ಶನದಲ್ಲಿದ್ದವು. ಈ ಬಾರಿ ಹೊಸ ಮೇಳ ಪಾವಂಜೆ ಕಾಲಮಿತಿ ಮಾತ್ರ ಪ್ರದರ್ಶಿಸಲಿದೆ. ಸುಂಕದಕಟ್ಟೆ, ಬಪ್ಪನಾಡು ಪರಿಸ್ಥಿತಿಗೆ ಅನುಗುಣವಾಗಿ ಕಾಲಮಿತಿ ಆಟ ಪ್ರದರ್ಶಿಸುವುದಾಗಿ ತಿಳಿಸಿವೆ.

ಜನವರಿಯಲ್ಲಿ ಪರಿಸ್ಥಿತಿ ಗಮನಿಸಿಕೊಂಡು ಮೇಳ ಹೊರಡಿಸುವ ಬಗ್ಗೆ ನಿರ್ಧರಿಸಲಾಗುವುದು. ಯಕ್ಷಗಾನಕ್ಕೆ ಕನಿಷ್ಠ 500 ಜನ ಸೇರುವ ಬಗ್ಗೆ ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ನೀಡಿದ್ದೇವೆ. ಕಲಾವಿದರ ಪರಿಸ್ಥಿತಿ ನೋಡಿಕೊಂಡು ಮಾನವೀಯತೆ ಆಧಾರದ ಮೇಲೆ ಅನುಮತಿ ನೀಡಬೇಕು. ಟೆಂಟ್ ಮೇಳದ ಆಟ ವಹಿಸಿಕೊಳ್ಳುವವರು ಪ್ರದರ್ಶನಕ್ಕೆ ಮುಂದೆ ಬರಬೇಕು.

- ಪಿ.ಕಿಶನ್ ಹೆಗ್ಡೆ, ಪಂಚ ಮೇಳಗಳ ಯಜಮಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net