ಮಂಗಳೂರಿನಲ್ಲೂ ಸ್ಥಾಪನೆಯಾಗಲಿ ಯಕ್ಷಗಾನ ಕೇಂದ್ರ

ಪಟ್ಲ ಸಂಭ್ರಮದಲ್ಲಿ ಡಾ ಎಂ. ಮೋಹನ್ ಆಳ್ವ ಅವರಿಗೆ 2026ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಡಿಯೂರು ಶ್ರೀ, ಎಡನೀರು ಶ್ರೀ, ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತಿತರರು ಇದ್ದರು.
ಪಟ್ಲ ಸಂಭ್ರಮದಲ್ಲಿ ಡಾ ಎಂ. ಮೋಹನ್ ಆಳ್ವ ಅವರಿಗೆ 2026ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಡಿಯೂರು ಶ್ರೀ, ಎಡನೀರು ಶ್ರೀ, ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರದಿಂದ ಅನುದಾನ ತೆಗೆಸಿ ಕೊಡುವೆ > ಕ್ಯಾ. ಬ್ರಿಜೇಶ್ ಚೌಟ
  • ಅಡ್ಯಾರ್ ಗಾರ್ಡನ್‌ನಲ್ಲಿ 11ನೇ ವರ್ಷದ ಪಟ್ಲ ಸಂಭ್ರಮ
  • ಡಾ. ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ, ಪೊಲ್ಯರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ
ಮಂಗಳೂರು: ಮಂಗಳೂರಿನಲ್ಲಿ ಯಕ್ಷಗಾನ ಕೇಂದ್ರ ಸ್ಥಾಪಿಸುವಂತೆಯೂ, ಆ ಮೂಲಕ ಯಕ್ಷಗಾನ ಕಲೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆಯೂ ಪಟ್ಲ ಫೌಂಡೇಶನ್‌ನವರಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮನವಿ ಮಾಡಿದರು.
ಅಡ್ಯಾರ್ ಬಳಿಯ ಅಡ್ಯಾರ್ ಗಾರ್ಡನ್‌ನಲ್ಲಿ ಶನಿವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ 11ನೇ ವರ್ಷದ ಪಟ್ಲ ಸಂಭ್ರಮ 2026 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಯಕ್ಷಗಾನಕ್ಕೆ ಹೊಸ ದಿಕ್ಕು ಮತ್ತು ಸ್ವರೂಪವನ್ನು ನೀಡಿದವರೇ ಪಟ್ಲರು. ಯಕ್ಷಗಾನಕ್ಕೆ ಪೂರಕ ವಾತಾವರಣ ಇರುವ ಮಂಗಳೂರಿನಲ್ಲಿ ಯಕ್ಷಗಾನ ಕೇಂದ್ರವಾದರೆ ಆ ಮೂಲಕ ಯಕ್ಷಗಾನ ತರಬೇತಿ, ಕಾರ್ಯಕ್ರಮಗಳ ಮೂಲಕ ನಮ್ಮ ಸಾಂಸ್ಕೃತಿಕ ಸೊಗಡನ್ನು ಪಸರಿಸಬಹುದಾಗಿದೆ. ಯಕ್ಷಗಾನ ಕೇಂದ್ರ ಸ್ಥಾಪಿಸಿದಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವೆ. ಮಾತ್ರವಲ್ಲದೆ ರಾಜ್ಯದಲ್ಲಿ ಮುಂದೆ ಬಿಜೆಪಿ ಸರ್ಕಾರ ಬಂದರೆ ಕೇಂದ್ರಕ್ಕೆ ಅಗತ್ಯವಿರುವ ಜಾಗವನ್ನೂ ಮಂಜೂರು ಮಾಡಿ ಕೊಡುವೆ ಎಂದು ಬ್ರಿಜೇಶ್ ಚೌಟರು ಹೇಳಿದರು.
ಯಕ್ಷಧ್ರುವ ಪಟ್ಲ ಸಂಭ್ರಮವನ್ನು ಪಾವಂಜೆ ನಾಗವೃಕ್ಷ ಕ್ಷೇತ್ರದ ಧರ್ಮದರ್ಶಿ ಡಾ ಯಾಗಾಜಿ ನಿರಂಜನ ಭಟ್ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಉದ್ಘಾಟಿಸಿದರು.
ಪಟ್ಲ ಸಂಭ್ರಮದಲ್ಲಿ ಡಾ ಎಂ. ಮೋಹನ್ ಆಳ್ವ ಅವರಿಗೆ 2026ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2026ರ ಸಾಲಿನ ಪಟ್ಲ ಪ್ರಶಸ್ತಿಯನ್ನು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಲಿತವರೂ ಯಕ್ಷಗಾನದತ್ತ ಆಕರ್ಷಿತ 
ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನವಿತ್ತು, ತುಳುವರಲ್ಲಿ ಪ್ರೀತಿ, ಮಾನವೀಯತೆ, ವಿಶ್ವಾಸದ ಗೂಡು ಇದೆ. ಕಡಲಲ್ಲೂ ಯಕ್ಷಗಾನ ನಡೆಸುವಂತಹ ಸಾಹಸಕ್ಕೂ ಕೈ ಹಾಕಿದ್ದಾರೆ. ಪಟ್ಲರು ಕಲಾವಿದರ ನೋವು ಅರಿತಿರುವುದರಿಂದಲೇ ಇಂದು ಕೋಟಿಗಟ್ಟಲೆ ಹಣವನ್ನು ಸಮಾಜಕ್ಕೆ ಅರ್ಪಿಸುತ್ತಿದ್ದಾರೆ. ಇಂತಹವರನ್ನು ಪೋಷಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ರಂಗ ಕಲೆಯನ್ನು ಉತ್ತುಂಗಕ್ಕೇ ಕೊಂಡೊಯ್ಯಬೇಕು. ಬದುಕಿಗೆ ಆದರ್ಶ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಯಕ್ಷಗಾನಕ್ಕಿದೆ. ಇಂದು ಡಬಲ್ ಡಿಗ್ರಿ ಪಡೆದವರೂ ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರು ಆಶೀರ್ವಚನ ನೀಡಿದರು. ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಚಂಡೀಗಢದ ಮುಖ್ಯ ಕಾರ್ಯದರ್ಶಿ ರಾಜೇಶ್ ಪ್ರಸಾದ್ ಐಎಎಸ್, ಪ್ರೊ. ಎಂಎಲ್ ಸಾಮಗ, ಮುಂಬೈ ವಿ.ಕೆ. ಗ್ರೂಪ್ಸ್ ನ ಅಧ್ಯಕ್ಷ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಉದ್ಯಮಿ ವೇಣುಗೋಪಾಲ್ ಶೆಟ್ಟಿ ಮುಂಬೈ, ಅಜಿತ್ ಶೆಟ್ಟಿ ಅಂಕಲೇಶ್ವರ, ದಿವಾಕರ ರಾವ್ ಕಟೀಲು, ಯೋಗೀಂದ್ರ ಭಟ್ ಉಳಿ, ಉದ್ಯಮಿ ಡಾ. ಜಿ. ಶಂಕರ್ ಉಡುಪಿ, ಪಟ್ಲಗುತ್ತು ಮಹಾಬಲ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಅದ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಯೋಜನಾ ನಿರ್ದೇಶಕ ಡಾ. ಸತೀಶ್ ಭಂಡಾರಿ, ಉಪಾಧ್ಯಕ್ಷರಾದ ಅಶೋಕ್ ಆರ್ ಶೆಟ್ಟಿ ಪೆರ್ಮುದೆ, ದುರ್ಗಾಪ್ರಸಾದ್ ಪಿ.ವಿ. ಪಡುಬಿದ್ರೆ, ಬಾಲ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರಾಜೀವ್ ಪೂಜಾರಿ ಕೈಕಂಬ, ರವಿಚಂದ್ರ ಶೆಟ್ಟಿ ಅಶೋಕನಗರ, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ಆಳ್ವ ಕದ್ರಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

16 ಕೋಟಿ ರೂ. ಸಮಾಜಕ್ಕೆ ಅರ್ಪಣೆ

ಸಮಾರಂಭದಲ್ಲಿ ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 11 ವರ್ಷಗಳಲ್ಲಿ 16 ಕೋಟಿ ರೂ. ಮೌಲ್ಯದ ಸೇವಾ ಕಾರ್ಯಗಳನ್ನು ನೆರವೇರಿಸಿದೆ.

ಸಿನಿಮಾಗೆ ಇರುವಂತೆಯೇ ಯಕ್ಷಗಾನಕ್ಕೆ ಪಟ್ಲರು ಸೆಲೆಬ್ರಿಟಿಯಾಗಿದ್ದಾರೆ. ಯಕ್ಷ ರಸಿಕರ ಕಣ್ಮಣಿಯಾಗಿರುವ ಅವರ ಸಾಮಾಜಿಕ ಕಾರ್ಯವನ್ನು ಮೆಚ್ಚಲೇಬೇಕು. ಕಲೆಗಳಲ್ಲಿ ಯಕ್ಷಗಾನ ಮುಂಚೂಣಿಯಲ್ಲಿರುವುದು ನಮಗೆ ಹೆಮ್ಮೆ. ಜನಪದ, ಕಲೆ ನಮ್ಮ ತುಳುನಾಡಿನ ಸಂಪತ್ತು. ಸೊರಗಲು ಬಿಡಬಾರದು. ಯಕ್ಷಗಾನವನ್ನು ಮೇಲ್ದರ್ಜೆಗೆ ಕೊಂಡೊಯ್ಯಲು ನಾವು ಶ್ರಮಿಸೋಣ.

— ಡಾ. ಎಂ. ಮೋಹನ ಆಳ್ವ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net