ಯಕ್ಷಗಾನ ಕಲಾವಿದ ಶ್ರೀಧರ ಪೂಜಾರಿ ಪಂಜಾಜೆಯವರಿಗೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ

mng--19 Aug Shridara poojari
Published on

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹಿರಿಯ ಅರ್ಚಕರಾಗಿದ್ದ ದಿ.ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣಾ ಪ್ರಯುಕ್ತ ಹಿರಿಯ ಯಕ್ಷಗಾನ ವೇಷಧಾರಿ ಹಾಗೂ ಕಟೀಲಿನ 2ನೇ ಮೇಳದ ಪ್ರಬಂಧಕ ಶ್ರೀಧರ ಪೂಜಾರಿ ಪಂಜಾಜೆಯವರಿಗೆ ಈ ವರ್ಷದ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ನೀಡಲಾಗುವುದು.


ಆಸ್ರಣ್ಣ ಅಭಿಮಾನಿ ಬಳಗ ಕದ್ರಿ ಈ ಪ್ರಶಸ್ತಿಯನ್ನು ನೀಡುತ್ತಿದ್ದು ಚಿನ್ನದ ಪದಕದೊಂದಿಗೆ ಶ್ರೀಧರ ಪೂಜಾರಿಯವರನ್ನು ಗೌರವಿಸಲಾಗುವುದು. ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ಬಂಧುಗಳು ಆ.26ರಂದು ಸಂಜೆ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಹಮ್ಮಿಕೊಂಡಿರುವ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಆಸ್ರಣ್ಣ ಅಭಿಮಾನಿ ಬಳಗದ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ನವನೀತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಶ್ರೀಧರ ಪೂಜಾರಿಯರು ಉಳ್ಳಾಲ ತಾಲೂಕು, ಇರಾ ಗ್ರಾಮದ ಪಂಚಾಜೆಯವರಾಗಿದ್ದು, ಬಾಲ್ಯದಲ್ಲೇ ಯಕ್ಷಗಾನ ಕಲಾಸಕ್ತರಾಗಿ, ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲೇ ಪುಚ್ಚಕೆರೆ ವಿದ್ವಾನ್ ಕೃಷ್ಣ ಭಟ್‌ರವರ ಮೂಲಕ ಯಕ್ಷಗಾನದ ಪ್ರಾಥಮಿಕ ಪಾಠಗಳನ್ನು ಕಲಿತರು. ಬಳಿಕ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ದಶಾವತಾರಿ ಕೆ.ಗೋವಿಂದ ಭಟ್ ಮತ್ತು ದಿವಾಣ ಶಿವಶಂಕರ ಭಟ್‌ರವರಿಂದ ನಾಟ್ಯಾಭ್ಯಾಸದ ತರಬೇತಿಯನ್ನು ಹೊಂದುವ ಮೂಲಕ ಕಟೀಲು ಮೇಳಕ್ಕೆ ಸೇರಿದರು. 42 ವರ್ಷಗಳ ಸುದೀರ್ಘ ಕಾಲದಿಂದಲೂ ಕಲಾ ಸೇವೆಗೈಯ್ಯುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಕಟೀಲಿನ 2ನೇ ಮೇಳದ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಆರಂಭದ ದಿನಗಳಲ್ಲಿ ಸ್ತ್ರೀ ವೇಷಧಾರಿಯಾಗಿದ್ದ ಇವರು ಬಲಿಪ ನಾರಾಯಣ ಭಾಗವತರ ಪ್ರೇರಣೆಯಂತೆ ಪುಂಡು ವೇಷವನ್ನು ನಿರ್ವಹಿಸದ್ದಾರೆ. ಚಂಡ-ಮುಂಡ, ಲವ-ಕುಶ, ಅಭಿಮನ್ಯು, ರಾಮ, ಕೃಷ್ಣ ಜಯಂತ, ಮನ್ಮಥ ಇತ್ಯಾದಿ ಅನೇಕ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಇವರಿಗೆ ಬಲಿಪ ಭಾಗವತರು, ಪೆರುವಾಯಿ ನಾರಾಯಣ ಭಟ್, ರಾಜೀವ ಶೆಟ್ಟಿ ಅಜೆಕಾರು, ಪೆರುವಾಯಿ ನಾರಾಯಣ ಶೆಟ್ಟಿ ಮೊದಲಾದವರಿಂದ ಯೋಗ್ಯ ಮಾರ್ಗದರ್ಶನ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net