

ಮಂಗಳೂರು: ತೆಂಕುತಿಟ್ಟಿನ ಪರಂಪರೆಯ ಪ್ರಾತಿನಿಧಿಕ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ (82) ಬಂಟ್ವಾಳ ತಾಲೂಕು ಬಾಳೇಪುಣಿ ಗ್ರಾಮದ ಸುಳ್ಯಮೆ ಎಂಬಲ್ಲಿ ಬುಧವಾರ ಬೆಳಗ್ಗೆ ನಿಧನರಾದರು. ಇವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಅಳಿಕೆ ರಾಮಯ್ಯ ರೈಯವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ 12ರ ಹರೆಯದಲ್ಲಿ ಯಕ್ಷಗಾನ ರಂಗ ಪ್ರವೇಶಿಸಿದ ಇವರು ಇರಾ, ಧರ್ಮಸ್ಥಳ, ಕಟೀಲು, ಬಪ್ಪನಾಡು, ಕದ್ರಿ, ಪುತ್ತೂರು ಮೇಳಗಳಲ್ಲಿ 52 ವರ್ಷಗಳ ಕಲಾಸೇವೆಗೈದಿದ್ದಾರೆ. ಕಟೀಲು ಮೇಳದಲ್ಲಿ ದೀರ್ಘ ಕಾಲ ಸೇವೆ ಮಾಡಿದ್ದಾರೆ. ರಕ್ತಬೀಜ, ಹಿರಣ್ಯಕಶಿಪು, ಕಂಸ, ಋತುಪರ್ಣ, ಹನುಮಂತ ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದರು. ತುಳು ಪ್ರಸಂಗದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು.
ತಾಳ ಮದ್ದಲೆ ಅರ್ಥಧಾರಿಯಾಗಿಯೂ ಭಾಗವಹಿಸುತ್ತಿದ್ದರು. ಪಾತ್ರಗಳಲ್ಲಿ ಕಂಚಿನ ಕಂಠ, ಸ್ಪಷ್ಟ ಮಾತಿನ ಓಘದಿಂದ ಜನಜನಿತರಾಗಿದ್ದರು. ಜೀವನ ಕ್ರಮದಲ್ಲಿ ಕಿರಿಯರಲ್ಲಿಯೂ ಸೌಜನ್ಯದಿಂದ ಮಾತನಾಡುವ ಅವರ ಸುಶೀಲ, ಸ್ವಾಭಿಮಾನ ತುಂಬಿದ ಗಟ್ಟಿ ನಿಲುವು, ಧೀಮಂತಿಕೆ ಕಿರಿಯರಿಗೆ ಸದಾ ಅನುಸರಣಯೋಗ್ಯ. ಅನೇಕ ಸಂಘ ಸಂಸ್ಥೆಗಳಿಂದ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 2009ರಲ್ಲಿ ಯಕ್ಷಗಾನ ಕಲಾರಂಗವು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ ವರ್ಷ ಉಡುಪಿಯಲ್ಲಿ ಸರ್ಕಾರದ ವತಿಯಿಂದ ನಡೆದ ಮೊದಲ ಯಕ್ಷಗಾನ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿದ್ದರು.