ಮೂಡಲಪಾಯ ಕೇವಲ ಅನಕ್ಷರಸ್ಥರ ಕಲೆ ಅಲ್ಲ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಭಿಪ್ರಾಯ

18TMK_Yakshagaana new
Published on

ತುಮಕೂರು : ಯಕ್ಷಗಾನದ ಪ್ರಕಾರಗಳಾದ ಪಡುವಲಪಾಯ ಹಾಗೂ ಮೂಡಲಪಾಯ ಪರಸ್ಪರ ದೂರವಾಗಿದ್ದು, ಅವುಗಳನ್ನು ಹತ್ತಿರ ತರುವ ಕೆಲಸವಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬುಧವಾರ ಆಯೋಜಿಸಿದ್ದ 2019ನೇ ಸಾಲಿನ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಎರಡೂ ಪ್ರಕಾರಗಳು ನನ್ನ ಕಣ್ಣುಗಳು. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ ಎಂದು ಮಾಡಲು ಸಾಧ್ಯವಿಲ್ಲ. ಸರಿಸಮನಾಗಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಮೂಡಲಪಾಯ ಯಕ್ಷಗಾನದ ಸಾಧಕರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಲು ಸರ್ಕಾರ ಮುಂದಾಗಬೇಕು, ನಾಗರಿಕ ವಿದ್ಯೆಯ ಕೊರತೆ ಕಾರಣಕ್ಕೆ ಮೂಡಲಪಾಯ ಸೊರಗಿದೆ ಎಂದರು.

ದೇಶದಲ್ಲಿ ಮೂಡಲಪಾಯ ಉಳಿಸಲು ಅದಕ್ಕೆ ಸಾಮಾಜಿಕ ಪ್ರತಿಷ್ಠೆ ತಂದುಕೊಡಬೇಕು, ಇದು ಕೇವಲ ಅನಕ್ಷರಸ್ಥರ ಕಲೆ ಅಲ್ಲ, ಕಾಲಕ್ಕೆ ತಕ್ಕಂತೆ ಬದಲಾಗಬೇಕಷ್ಟೇ. ನಿರ್ದಿಷ್ಟ ಯೋಜನೆ ಇಟ್ಟುಕೊಂಡು ಕ್ರಮಬದ್ಧವಾಗಿ ಮುಂದುವರಿದರೆ ಮೂಡಲಪಾಯದ ಶ್ರೀಮಂತಿಕೆಯನ್ನು ಎಲ್ಲರಿಗೂ ತಿಳಿಸಲು ಸಾಧ್ಯ. ಆಡಳಿತ ನಡೆಸುವವರಿಗೆ ಮೂಡಲಪಾಯ ಕಲೆಯ ಮಹತ್ವ ತಿಳಿಸುವ ಅಗತ್ಯವಿದೆ ಎಂದರು.

ಶಿಷ್ಟ ಸಾಹಿತ್ಯದ ಸಾರವನ್ನು ಗ್ರಾಮೀಣ ಜನರಿಗೆ ಪ್ರಸಂಗಗಳ ಮೂಲಕ ನೀಡಿದ ಹೆಗ್ಗಳಿಕೆ ಯಕ್ಷಗಾನ ಕವಿಗಳಿಗೆ ಸಲ್ಲುತ್ತದೆ. 65 ವರ್ಷಗಳಿಂದ ಯಕ್ಷಗಾನ ಪ್ರಸಂಗದ ಅಧ್ಯಯನ ಸಾಗಿದೆ, ಕಿರು ಕಾವ್ಯರೂಪವಾಗಿಸಿ ರಂಗಸ್ಥಳದಲ್ಲಿ ತೋರಿಸಿಕೊಡಲಾಗಿದೆ, ಪ್ರಸಂಗ ಸಾಹಿತ್ಯಕ್ಕೆ ಮತ್ತಷ್ಟು ಮನ್ನಣೆ ಸಿಗಲಿ ಎಂದು ಯಕ್ಷಗಾನ ವಿದ್ವಾಂಸ ಡಾ.ಆನಂದರಾಮ್ ಉಪಾಧ್ಯಾಯ ಹೇಳಿದರು.

ಮೂಡಲಪಾಯ ಯಕ್ಷಗಾನ ತಜ್ಞ ಡಾ.ಚಂದ್ರು ಕಾಳೇನಹಳ್ಳಿ ಮಾತನಾಡಿ, ಮೂಡಲಪಾಯ ಯಕ್ಷಗಾನಕ್ಕೆ ಇನ್ನೂ ಉತ್ತೇಜನದ ಅಗತ್ಯವಿದೆ. ಬಯಲುಸೀಮೆಯಲ್ಲಿ ವಿನಾಶದ ಅಂಚಿನಲ್ಲಿನಲ್ಲಿರುವ ಮೂಡಲಪಾಯ ಯಕ್ಷಗಾನ ಉಳಿಸಿಕೊಳ್ಳಬೇಕು ಎಂದರು. ಪುಸ್ತಕ ಪ್ರಶಸ್ತಿ ಪಡೆದ ಡಾ.ಚಿಕ್ಕಣ್ಣ ಯಣ್ಣೇಕಟ್ಟೆ ಮಾತನಾಡಿದರು.

ರಾಜ್ಯದ ವಿವಿಧ ಕಡೆಗಳಲ್ಲಿ ಸಂಕಷ್ಟದಲ್ಲಿರುವ ಕಲಾವಿದರ ಮಾಸಾಶನ ಅರ್ಜಿ ತ್ವರಿತ ವಿಲೇವಾರಿ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಭರವಸೆ ನೀಡಿದರು. ಯಕ್ಷಗಾನ ಕಲಾವಿದ ಕೆ.ಸಿ.ನಾರಾಯಣ, ಮುಖವೇಣಿ ರಾಜಣ್ಣ, ಎ.ಜಿ.ಅಶ್ವತ್ಥನಾರಾಯಣ ಪ್ರಶಸ್ತಿ ಸ್ವೀಕರಿಸಿದರು, ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಇದ್ದರು.

ರಾಜಕೀಯ ಮುಖಂಡರ ಹಿಂಜರಿಕೆ ಕಾರಣಕ್ಕೆ ಜಿಲ್ಲೆಯಲ್ಲಿ ಮೂಡಲಪಾಯ ಯಕ್ಷಗಾನಕ್ಕೆ ಮನ್ನಣೆ ಸಿಕ್ಕಿಲ್ಲ, ಜಿಲ್ಲೆಯಲ್ಲಿ ಸಾಕಷ್ಟು ಕಲೆ ಇದ್ದರೂ ಅದಕ್ಕೆ ಮನ್ನಣೆ ಸಿಕ್ಕಿಲ್ಲ, ಸಾಹಿತ್ಯವನ್ನು ಜನರ ನಡುವೆ ಉಳಿಸಲು ಪ್ರದರ್ಶನ ಕಲೆ ಶ್ರಮಿಸುತ್ತಿದೆ, ಪ್ರತಿ ಜನಮನಕ್ಕೂ ಮುಟ್ಟಿಸುವ ಶಕ್ತಿ ಕಲಾವಿದರಿಗಿದೆ, ತರಬೇತಿ ಶಾಲೆ ಆರಂಭಿಸಬೇಕು. ಬಾ.ಹ.ರಮಾಕುಮಾರಿ, ಕಸಾಪ ಜಿಲ್ಲಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net