

ಉಳ್ಳಾಲ: ಪಠ್ಯಕ್ಕೆ ಸೀಮಿತವಾದ ಶಿಕ್ಷಣದಿಂದ ಇಂದು ಮಕ್ಕಳು ಮೊಬೈಲ್‌ನ ದಾಸರಾಗುತ್ತಿದ್ದಾರೆ, ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಸಮಯ ಸದುಪಯೋಗಪಡಿಸಿ ಮೊಬೈಲ್ ಮುಕ್ತ ವಾತಾವರಣ ಸೃಷ್ಟಿಯಾಗುತ್ತದೆ. ಯಕ್ಷಗಾನ ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಆಧ್ಯಾತ್ಮಿಕತೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಡಿಪು ಘಟಕ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಅಭಿಪ್ರಾಯಪಟ್ಟರು.
ಯಕ್ಷದ್ರುವ ಪಟ್ಲ ಫೌಂಡೇಶನ್ ವತಿಯಿಂದ ಹರೇಕಳ ಶ್ರೀರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಉಚಿತ ಯಕ್ಷದ್ರುವ ಯಕ್ಷ ಶಿಕ್ಷಣ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಮಾತನಾಡಿದರು. ಜಂಟಿ ವಿದ್ಯಾಸಂಸ್ಥೆಗಳ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಗುರು ಅಶ್ವಥ್ ಮಂಜನಾಡಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಮ್ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ರೈ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ಶಿಕ್ಷಕ ರವಿಶಂಕರ್ ವಂದಿಸಿದರು. ಶಿಕ್ಷಕರಾದ ಕೃಷ್ಣ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುವುದರಿಂದ ಪಠ್ಯ ಕಲಿಕೆಗೂ ಪ್ರಯೋಜನ ಆಗುತ್ತದೆ. ವಿದ್ಯಾರ್ಥಿಗಳಲ್ಲಿ ನಾಟ್ಯ, ಮಾತುಗಾರಿಕೆ, ಸೃಜನಶೀಲತೆಯ ಅಭಿವೃದ್ಧಿ ಹೊಂದುವುದರೊಂದಿಗೆ ಸಂಸ್ಕಾರವೂ ಬೆಳೆಯುತ್ತದೆ. ವಾಸುದೇವ ಐತಾಳ್ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕ