ಯಕ್ಷಧ್ರುವದಿಂದ ಸಮಾಜ ನಿರ್ಮಾಣ ಸಾಧ್ಯ, ಯಕ್ಷಧ್ರುವ ಪಟ್ಲ ಸಂಭ್ರಮಕ್ಕೆ ಸಂಭ್ರಮಕ್ಕೆ ಚಾಲನೆ ನೀಡಿ ನೆಟ್‌ವರ್ಕ ಎಕ್ಸ್‌ಕ್ಲೂಸಿವ್ ನಿರ್ದೇಶಕ ಸಿಎ ದಿವಾಕರ್ ರಾವ್

patla
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಾರಥ್ಯದಲ್ಲಿ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ಸಂಭ್ರಮ-2023 ಕಾರ್ಯಕ್ರಮ ಕಲಾ ಸಾಧಕರನ್ನು ಗೌರವಿಸಲಾಯಿತು.
Published on

ಮಂಗಳೂರು: ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮೂಲಕ ಜಾತಿ ಬೇತ ಮರೆತು ಬಡವರ ಕಣ್ಣೀರೋರೆಸುವ ಕಾರ್ಯ ನಿರಂತರವಾಗಿ ನಡೆದಿದ್ದು, ಇಂತಹ ಸಂಘಟನೆಗಳಿಂದ ಯೋಗ್ಯ ಹಾಗೂ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ನೆಟ್‌ವರ್ಕ ಎಕ್ಸ್‌ಕ್ಲೂಸಿವ್ ನಿರ್ದೇಶಕ ಸಿಎ ದಿವಾಕರ್ ರಾವ್ ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಾರಥ್ಯದಲ್ಲಿ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ಸಂಭ್ರಮ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಟ್ಲ ಸತೀಶ್ ಶೆಟ್ಟಿಯವರು ಯಕ್ಷಗಾನ ಕಲಾವಿದರ ಹಿತರಕ್ಷಣೆಗಾಗಿ ಸ್ಥಾಪಿಸಿರುವ ಪಟ್ಲ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸದಾ ಮುಂದಿದೆ. ಅವರು ಮುಂದೆಯೂ ಇದೇ ರೀತಿ ಸಮಾಜದ ನೊಂದವರ ಕಣ್ಣೀರು ಒರೆಸಲಿ. ಜಾತಿ ಧರ್ಮ ಬೇಧಭಾವವಿಲ್ಲದೆ ಎಲ್ಲರನ್ನೂ ತಮ್ಮವರೆಂದುಕೊಂಡಿರುವ ಪಟ್ಲ ಸತೀಶ್ ಶೆಟ್ಟಿಯವರು ಅಭಿನಂದನಾರ್ಹರು ಎಂದರು.

ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಲಕ್ಷ್ಮಿನಾರಾಯಣ ಅಸ್ರಣ್ಣ ಮಾತನಾಡಿ, ಪಟ್ಲ ಸತೀಶ್ ಶೆಟ್ಟಿಯವರ ತಂದೆ ಮಹಾಬಲ ಶೆಟ್ಟಿಯವರ ಕಲಾಸೇವೆಯನ್ನು ಬಾಲ್ಯದಿಂದಲೇ ಗಮನಿಸಿಕೊಂಡು ಬಂದು ಯಕ್ಷಗಾನ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡರು. ಅವರಿಗೆ ಕಟೀಲು ದುರ್ಗೆಯು ನೊಂದ ಕಲಾವಿದರ ಕಣ್ಣೀರು ಒರೆಸಲು ಶಕ್ತಿ ತುಂಬಿದ್ದು ಈಗ ಸಾವಿರಾರು ಮಂದಿ ನೊಂದವರ, ಅಶಕ್ತರ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಕಲಾಮಾತೆ ಸತೀಶ್ ಶೆಟ್ಟಿಯವರನ್ನು ಅಪ್ಪಿ ಹಿಡಿದ ಪರಿಣಾಮ ನೊಂದವರಿಗೆ ಅವರು ದೇವರಾಗಿದ್ದಾರೆ. ಮುಂದೆ ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದರು.

ಎಡನೀರು ಸಂಸ್ಥಾನದ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಮಾಣಿಲ ಪರಮಹಂಸ ಸ್ವಾಮೀಜಿ ಆಶೀರ್ವಚನದ ನೀಡಿದರು. ಟ್ರಸ್ಟ್‌ನ ಗೌರವಾಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಟ್ರಸ್ಟ್ ನ ಪ್ರಧಾನ ಸಂಚಾಲಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ, ಪ್ರಧಾನ ಸಂಚಾಲಕ ಶಶಿಧರ್ ಶೆಟ್ಟಿ ಬರೋಡಾ, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಸಿಎ ದಿವಾಕರ್ ರಾವ್ ಕಟೀಲು, ಡಾ.ಪ್ರಶಾಂತ್ ಮಾರ್ಲ, ಡಾ. ಗಣೇಶ್ ಹೆಚ್.ಕೆ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ರಾಜು, ಕುಡುಪು ನರಸಿಂಹ ತಂತ್ರಿ, ಸವಣೂರು ಸೀತಾರಾಮ್ ರೈ, ಪೆರ್ಮುದೆ ಅಶೋಕ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಭುಜಬಲಿ ಧರ್ಮಸ್ಥಳ, ಜಯರಾಮ ಶೇಖ, ಉದಯ್ ಶೆಟ್ಟಿ ಕೆರೆಕಟ್ಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಕಲಾ ಗೌರವ

ವೈದಿಕ ಕ್ಷೇತ್ರದ ಸಾಧಕ ಕುಡುಪು ನರಸಿಂಹ ತಂತ್ರಿಗಳು, ಮಾಧ್ಯಮ ಕ್ಷೇತ್ರದಲ್ಲಿ ಮನೋಹರ ಪ್ರಸಾದ್, ಭಾರತೀಯ ಸೇನೆಯ ಬ್ರಿಗೇಡಿಯರ್ ಐ.ಎನ್. ರೈ, ಕಲಾ ಸಂಘಟನೆಗಾಗಿ ಕಲಾರಂಗ ಉಡುಪಿ, ಕನ್ನಡ ಸಂಘ ಬಹೈರೆನ್, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ವಿದ್ವಾನ್ ಯೋಗೀಶ್ ಶರ್ಮ, ಹರಿಕಥೆ ಮಹಾಬಲ ಶೆಟ್ಟಿ ಬಳ್ಳಪದವು, ರಂಗಭೂಮಿ/ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ತಮ್ಮ ಲಕ್ಷ್ಮಣ, ಭರತನಾಟ್ಯ ಕ್ಷೇತ್ರದಲ್ಲಿ ನಾಟ್ಯಾಚಾರ್ಯ ಉಳ್ಳಾಲ ಮೋಹನ್‌ಕುಮಾರ್, ಕಂಬಳ ಕ್ಷೇತ್ರದಲ್ಲಿ ಭಾಸ್ಕರ ಕೋಟ್ಯಾನ್ ಕೊಳಕೆ ಇರ್ವತ್ತೂರು, ಡಿ ಮನೋಹರ್ ಕುಮಾರ್, ಶಿವರಾಮ ಪಣಂಬೂರು, ಕೊಳ್ತಿಗೆ ನಾರಾಯಣ ಗೌಡ, ಮಹಾಬಲ ದೇವಾಡಿಗ ಕಮಲಶಿಲೆ, ರಘುರಾಮ ಮಡಿವಾಳ ಮಂದಾರ್ತಿ, ಶಂಭುಶರ್ಮ ವಿಟ್ಲ, ಶಿವರಾಮ ಪಣಂಬೂರು, ಕೊಲ್ಯಾರು ರಾಜು ಶೆಟ್ಟಿ ಮುಂಬಯಿ, ಲೀಲಾವತಿ ಬೈಪಾಡಿತ್ತಾಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net