

ಮಂಗಳೂರು: ಯಕ್ಷಗಾನ ಕಲಾ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಸುಜಯೀಂದ್ರ ಹಂದೆ ವಿರಚಿತ ಕೃತಿ ‘ಯಕ್ಷ ದೀವಟಿಗೆ’ ಯ ಅನಾವರಣವು ಇತ್ತೀಚೆಗೆ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ನಡೆಯಿತು.
ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಕೃತಿ ಅನಾವರಣ ಗೊಳಿಸಿ ಮಾತನಾಡಿದರು. ಸುಜಯೀಂದ್ರರ ಈ ಕೃತಿ ಸ್ವಾನುಭವದ ಬಲ, ಸೂಕ್ಷ್ಮತೆಗಳ ನೋಟ, ನಿರ್ದೇಶನ,ಭಾಗವತನಾಗಿ ಕಂಡುಕೊಂಡ ಕೆಲವೊಂದು ವಿಚಾರಗಳ ಮೂಲಕ ವಿಮರ್ಶೆಯಿಂದ ಕೂಡಿದ್ದು, ರೂಪ ಪ್ರಧಾನವಾದ ಕಲೆಯ ಬಗ್ಗೆ ಎಚ್ಚರ ಆವರಿಸಿರುವುದು ಸ್ಪಷ್ಟವಾಗಿದೆ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಮಾತನಾಡಿ,ಯಕ್ಷಗಾನ ರಂಗದಲ್ಲಿ ಸುಜಯೀಂದ್ರ ಅವರು ಪಡೆದಿರುವ ಜ್ಞಾನವನ್ನು ಈ ಕೃತಿಯಲ್ಲಿ ಬಳಸಿಕೊಂಡು ವಿಮರ್ಶಾತ್ಮಕವಾಗಿ ವಿವೇಚಿಸಿದ್ದಾರೆ. ಈ ಕೃತಿಯು ದೀವಟಿಗೆಯಂತೆ ಪ್ರಕಾಶಮಾನವಾಗಿ ಪ್ರಜ್ವಲಿಸಲಿ ಎಂದು ಹಾರೈಸಿದರು.
ಕಾವ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಹಂದೆ ವಂದಿಸಿದರು.