

ಗೋಕರ್ಣ: ಕ್ಷೇತ್ರದ ಸನಾತನ ಪರಂಪರೆಯಂತೆ ಮಂಗಳವಾರ ಇಲ್ಲಿನ ಶ್ರೀವೆಂಕಟ್ರಮಣ ಮಂದಿರದ ಚಂದ್ರಶಾಲೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಋಗ್ವೇದೀಯ ಉಪಾಕರ್ಮ ಆಯೋಜಿತವಾಯಿತು. ಹಿರಿಯ ಕ್ಷೇತ್ರ ಪುರೋಹಿತ ವೇ.ನಾರಾಯಣ ಉಮಾಶಿವ ಉಪಾಧ್ಯಾಯ ನೇತೃತ್ವದಲ್ಲಿ ಕ್ಷೇತ್ರದ ನೂರಾರು ವೈದಿಕರು ನೂತನ ಯಜ್ಞೋಪವೀತ ಧಾರಣೆ ಕೈಗೊಂಡರು. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಶ್ರವಣಾ ನಕ್ಷತ್ರದಂದು ಈ ಧಾರ್ಮಿಕ ವಿಧಿ ಆಚರಿಸಲಾಗುತ್ತದೆ.
ಶ್ರೀಮಹಾಗಣಪತಿ ದೇಗುಲ: ಇದೇ ರೀತಿಯಲ್ಲಿ ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಮಹಾಗಣಪತಿ ಮಂದಿರದಲ್ಲಿಯೂ ಕ್ಷೇತ್ರ ಪುರೋಹಿತರಾದ ವೇ.ಭೂಷಣ ಉಪಾಧ್ಯಾಯ ಮತ್ತು ವೇ.ಬಾಲಚಂದ್ರ ದೀಕ್ಷಿತ ನೇತೃತ್ವದಲ್ಲಿ ಉಪಾಕರ್ಮ ಮೂಲಕ ನೂತನ ಯಜ್ಞೋಪವೀತ ಧಾರಣೆ ನಡೆಯಿತು.