

ಕಲಬುರಗಿ: ವಿಜ್ಞಾನೇಶ್ವರ ಬರೆದ ಮಿತಾಕ್ಷರ ಹಿಂದು ಕಾನೂನು ಜತೆಗೆ ಭಾರತೀಯ ನ್ಯಾಯಶಾಸ್ತçವೂ ಆಗಿದೆ. ಅಪರಾಧಿಕ, ಭೂ ಕಾನೂನು, ಕೊಲೆಸಾಕ್ಷ್ಯ ಸೇರಿ ಎಲ್ಲ ಅಂಶಗಳಿವೆ. ಯಾಜ್ಞವಲ್ಕ್ಯಸೃತಿಯಲ್ಲಿರುವಂತಹ ಅಂಶಗಳು ಮಿತಾಕ್ಷರದಲ್ಲೂ ಇವೆ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಜೆ.ಎಸ್. ಪಾಟೀಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀವಿಜಯ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಶ್ರೀನಿವಾಸ ಸಿರನೂರಕರ್ ರಚಿಸಿದ ಯಾಜ್ಞವಲ್ಕ್ಯ ಸೃತಿ: ಅಂದು ಇಂದು ಎಂದೆಂದೂ ಕೃತಿ ಬಿಡುಗಡೆಗೊಳಿಸಿದ ಅವರು, ಸಿರನೂರಕರ್ ಕೃತಿಯಲ್ಲಿ ಶ್ಲೋಕಗಳ ಕನ್ನಡ ವ್ಯಾಖ್ಯಾನ ಜತೆಗೆ ಆಧುನಿಕ ಭಾರತದ ಬೆಳವಣಿಗೆ ಮತ್ತು ಪ್ರಸ್ತುತ ಸಮಾಜಕ್ಕೆ ಕೃತಿಯ ಉಪಯುಕ್ತತೆ ಕುರಿತು ವಿಶ್ಲೇಷಿಸಿದ್ದರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಪಂಚದ ಜ್ಞಾನ ಪರಂಪರೆಯಲ್ಲಿ ಭಾರತೀಯರಿಗೆ ವಿಶಿಷ್ಟ ಸ್ಥಾನವಿದೆ. ಯಾಜ್ಞವಲ್ಕ್ಯರು ಅಗ್ರಗಣ್ಯ ಸೃತಿಕಾರ. ಆಡು ಮುಟ್ಟದ ಗಿಡವಿಲ್ಲ ಎನ್ನುವಂತೆ ಯಾಜ್ಞವಲ್ಕ್ಯರು ಮುಟ್ಟದ ನ್ಯಾಯಶಾಸ್ತçವಿಲ್ಲ ಎಂದರು.
ಸಿಯುಕೆ ಭೌತಶಾಸ್ತç ಪ್ರಾಧ್ಯಾಪಕ ರಾಜೀವ ಜೋಶಿ ಮಾತನಾಡಿ, ಬದುಕುವ ಜೀವನ ಶೈಲಿಯನ್ನು ಯಾಜ್ಞವಲ್ಕ್ಯ ಸೃತಿ ಕೃತಿಯಲ್ಲಿ ಕಾಣುತ್ತೇವೆ. ಭಾರತೀಯ ಚಿಂತನೆಗಳಲ್ಲಿನ ವಿಶೇಷ ಜ್ಞಾನ ಸ್ವರೂಪವನ್ನು ಈ ಕೃತಿ ನಿರೂಪಿಸುತ್ತದೆ. ನಮ್ಮತನ ಉಳಿಸಿಕೊಳ್ಳಲು ಇಂತಹ ಕೃತಿ ನೆರವಾಗುತ್ತವೆ ಎಂದು ಹೇಳಿದರು.
ಲೇಖಕ ಶ್ರೀನಿವಾಸ ಸಿರನೂರಕರ್ ಮಾತನಾಡಿ, ಯಾಜ್ಞವಲ್ಕ್ಯ ಸೃತಿ ಸಾಗರವಿದ್ದಂತೆ. ಮಹಾಮಹಿಮ ಯೋಗೀಶ ಯಾಜ್ಞವಲ್ಕ್ಯರಲ್ಲಿ ಅನನ್ಯ ಮತ್ತು ಅಸಾಧಾರಣ ವೈಜ್ಞಾನಿಕ ವಿಜ್ಞಾನ ಇತ್ತು. ಆಧುನಿಕ ವಿಜ್ಞಾನದ ಪ್ರಮುಖ ಶಾಖೆಗಳಾದ ಜೀವಶಾಸ್ತ್ರ, ಭ್ರೂಣಶಾಸ್ತ್ರ, ಶರೀರ ರಚನಾಶಾಸ್ತ್ರ, ಶರೀರ ವಿಜ್ಞಾನ ಮುಂತಾದವುಗಳ ಬಗ್ಗೆ ಅವರಿಗಿದ್ದ ಪ್ರಖರ ಜ್ಞಾನ ಮತ್ತು ಆಳವಿದ್ಯೆ ಬೆರುಗು ಮೂಡಿಸುತ್ತದೆ ಎಂದು ತಿಳಿಸಿದರು.
ಶ್ರೀವಿಜಯ ಪ್ರಕಾಶನ ಉಪಾಧ್ಯಕ್ಷ ಜಗನ್ನಾಥ ಉಟಗಿ ಅಧ್ಯಕ್ಷತೆ ವಹಿಸಿದ್ದರು. ಗೋಪಾಲಾಚಾರ್ಯ ಅಕಮಂಚಿ, ಸ್ವಾಮಿರಾವ ಕುಲಕರ್ಣಿ ಇತರರಿದ್ದರು. ಪ್ರಕಾಶನದ ಪ್ರಧಾನ ಸಂಚಾಲಕ ಸಂಜೀವ ಸಿರನೂರಕರ್ ಸ್ವಾಗತಿಸಿದರು. ವ್ಯಾಸರಾಜ ಸಂತೆಕೆಲ್ಲೂರ ನಿರೂಪಣೆ ಮಾಡಿದರು. ವೆಂಕಟೇಶ ಮುದಗಲ್ ವಂದಿಸಿದರು.