

ಯಲ್ಲಾಪುರ: ಪಟ್ಟಣದ ನಾಯಕನಕೆರೆಯ ಶಾರದಾಂಬಾ ದೇವಾಲಯದಲ್ಲಿ ನೂಲು ಹುಣ್ಣಿಮೆಯ ನಿಮಿತ್ತ ಬುಧವಾರ ಸಾಮೂಹಿಕ ಯಜ್ಞೋಪವೀತ ಧಾರಣ ಕಾರ್ಯಕ್ರಮ ಜರುಗಿತು.
ಗಣೇಶ ಪೂಜೆ, ಪುಣ್ಯಾಹ, ಉಪಾಕರ್ಮ ಹವನ ನೆರವೇರಿಸಲಾಯಿತು. ದೇವಾಲಯದ ಅರ್ಚಕ ಗೋಪಾಲಕೃಷ್ಣ ಭಟ್ಟ ಕುಂಕಿಪಾಲ ಹಾಗೂ ಶಾರದಾಂಬಾ ಪಾಠಶಾಲೆಯ ಅಧ್ಯಾಪಕ ವಿಶ್ವನಾಥ ಭಟ್ಟ ಅವರ ನೇತೃತ್ವದಲ್ಲಿ ನಡೆದ ಯಜ್ಞೋಪವೀತ ಧಾರಣ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ದೇವಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್, ಕಾರ್ಯದರ್ಶಿ ನರಸಿಂಹ ಗೇರಗದ್ದೆ, ವ್ಯವಸ್ಥಾಪಕ ಎನ್.ಎಸ್. ಭಟ್, ಪ್ರಮುಖರಾದ ಸುಬ್ರಹ್ಮಣ್ಯ ಹೆಗಡೆ, ಜಿ.ಎನ್. ಭಟ್ ತಟ್ಟಿಗದ್ದೆ, ಶ್ರೀಪಾದ ಭಟ್ಟ, ಪ್ರಸನ್ನ ಭಟ್ಟ ಇತರರಿದ್ದರು.
ಪಟ್ಟಣದ ರವೀಂದ್ರ ನಗರ ಶಕ್ತಿ ಗಣಪತಿ ದೇವಸ್ಥಾನದಲ್ಲೂ ಸಾಮೂಹಿಕ ಯಜ್ಞೋಪವೀತ ಧಾರಣೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಅರ್ಚಕ ವೆಂಕಟರಮಣ ಭಟ್ಟ ಚಂದಗುಳಿ ಮಾರ್ಗದರ್ಶನದಲ್ಲಿ ಸುತ್ತಮುತ್ತಲಿನ 50 ಕ್ಕೂ ಹೆಚ್ಚು ಜನರು ಯಜ್ಞೋಪವೀತ ಧಾರಣ ಮಾಡಿದರು.