

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಗರದಲ್ಲಿ ಶನಿವಾರ ಅಬ್ಬರದ ಪ್ರಚಾರ ಮಾಡಿದರು.
ನಗರದ ವಿವಿಧೆಡೆಗಳಲ್ಲಿ ಸಂಚಾರ ಮಾಡಿ ಬಿರುಸಿನ ಪ್ರಚಾರ ನಡೆಸಿದ ಅವರು, ಕೆಲವೆಡೆ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಮತ್ತೆ ಕೆಲವೆಡೆ ತೆರೆದ ವಾಹನದಲ್ಲಿ ರೋಡ್ ಷೋ ಮೂಲಕ ಮತ ಕೇಳಿದರು. ಈ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಬಾವುಟಗಳು ರಾರಾಜಿಸಿದವು.
ನಗರದ ಕನ್ನೇಗೌಡನ ಕೊಪ್ಪಲಿನಿಂದ ಮತಪ್ರಚಾರ ಆರಂಭಿಸಿದ ಯದುವೀರ್ ಅವರು, ಸಿದ್ದಪ್ಪಾಜಿ ದೇವಸ್ಥಾನ, ರೈಲ್ವೆ ಗೇಟ್ ಮುಖ್ಯ ರಸ್ತೆ, ಗಂಗೋತ್ರಿ ಬಡಾವಣೆ, ಜನತಾನಗರ, ಪಂಚಮುಖಿ ದೇವಸ್ಥಾನ, ಮಂಡಿಮೊಹಲ್ಲಾ, ಅಕ್ಬರ್ ರಸ್ತೆ, ಶ್ರೀ ಟಾಕೀಸ್ ರಸ್ತೆ, ಕೆಟಿ ರಸ್ತೆ ಮುಖಾಂತರ ಇರ್ವಿನ್ ರಸ್ತೆ, ಗಣಪತಿ ದೇವಸ್ಥಾನ, ಪ್ರಭಾ ಟಾಕೀಸ್ ಸುತ್ತಮುತ್ತ ಹಾಗೂ ಅಶೋಕ ರಸ್ತೆಯಲ್ಲಿ ತೆರೆದ ಜೀಪಿನಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.
ಪಾದಯಾತ್ರೆ ವೇಳೆ ಜನರು ಮನೆಗೆ ಕರೆದು ಎಳನೀರು ನೀಡಿದರು. ಆಯಕಟ್ಟಿನ ಸ್ಥಳಗಳಲ್ಲಿ ಜಮಾಯಿಸಿದ್ದ ಜನರಿಂದ ಯದುವೀರ್‌ಗೆ ಹಾರ-ತುರಾಯಿ ನೀಡಿ, ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಸನ್ಮಾನಿಸಲು ಸಾರ್ವಜನಿಕರಲ್ಲಿ ಹಲವೆಡೆ ಪೈಪೋಟಿ ನಡೆಯಿತು. ಅವರೊಂದಿಗೆ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಜನರು ಸಂಭ್ರಮಿಸಿದರು.
ಮಂಡಿ ಮೊಹಲ್ಲಾದಲ್ಲಿ ಯದುವೀರ್ ಪ್ರಚಾರ ನಡೆಸಿದ ವೇಳೆ ಸ್ಥಳೀಯರು ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಪಟಾಕಿ ಸಿಡಿಸದಂತೆ ಬಿಜೆಪಿ, ಜೆಡಿಎಸ್ ಮುಖಂಡರು ಮನವಿ ಮಾಡಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಎರಡೂ ಪಕ್ಷಗಳ ಕಾರ್ಯಕರ್ತರು ಪ್ರಚಾರದ ಸಂದರ್ಭದಲ್ಲಿ ಇವರಿಗೆ ಸಾಥ್ ನೀಡಿದರು.
ಮತ ಪ್ರಚಾರದ ಸಂದರ್ಭದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಕಣ್ಣಾರೆ ಕಾಣುತ್ತಿದ್ದು, ಗೆದ್ದರೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಯದುವೀರ್ ಭರವಸೆ ನೀಡಿದರು.
ಮತಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಮನ್ವಯತೆಯಿಂದ ಪ್ರಚಾರ ನಡೆಸುತ್ತಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರಚಾರದಲ್ಲಿ ನಿರತರಾಗಿದ್ದು, ಪ್ರಚಾರಕ್ಕೆ ಹೋದೆಡೆಯೆಲ್ಲ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.
ಮೈಸೂರು ಅರಮನೆ, ರಾಜಮನೆತನದ ಬಗ್ಗೆ ಜನರಿಗೆ ಇರುವ ಭಾವನಾತ್ಮಕ ಸಂಬಂಧಕ್ಕೆ ಇದು ಸಾಕ್ಷಿಯಾಗಿದೆ. ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದು, ರಾಜ ಮಹಾರಾಜ ಎಂಬುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ನಾನು ಆಯ್ಕೆಯಾದರೆ ಒಬ್ಬ ಸಂಸದನಾಗಿ ಏನೆಲ್ಲ ಜನಪರ ಕಾರ್ಯಗಳನ್ನು ಮಾಡಬಹುದೋ ಅವೆಲ್ಲವನ್ನೂ ಮಾಡುತ್ತೇನೆ ಎಂದು ತಿಳಿಸಿದರು.