ಯದುವೀರ್ ಬಿಜೆಪಿ ಅಭ್ಯರ್ಥಿ

Yaduveer (1)
Published on

ಮೈಸೂರು: ತೀವ್ರ ಕುತೂಹಲ ಕೆರಳಿಸಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದ್ದು, ಕ್ಷೇತ್ರವನ್ನು ಸತತ ಎರಡು ಬಾರಿ ಪ್ರತಿನಿಧಿಸಿದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈತಪ್ಪಿದೆ.

ಕಳೆದ ಕೆಲವು ದಿನಗಳಿಂದ ಯದುವೀರ್ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಚರ್ಚೆಗಳು ಪ್ರಾರಂಭವಾಯಿತು. ಈ ಚರ್ಚೆಯ ನಡುವೆ ಪ್ರತಾಪ್ ಸಿಂಹ ಮಗದೊಮ್ಮೆ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದರು. 10 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಅನ್ನು ಸಿದ್ಧಪಡಿಸಿದ್ದ ಪ್ರತಾಪ್ ಸಿಂಹ ಪ್ರಧಾನಿ ನರೇಂದ್ರ ಮೋದಿಯಿಂದ ಸಾಮಾನ್ಯ ಕಾರ್ಯಕರ್ತರವರೆಗೆ ರಿಪೋರ್ಟ್ ಕಾರ್ಡ್ ನೀಡಿ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದರು. ಆದರೆ, ಪ್ರತಾಪ್ ಸಿಂಹ ವಿರುದ್ಧ ಜಿಲ್ಲೆಯ ಬಿಜೆಪಿ ಮುಖಂಡರು ಹೈಕಮಾಂಡ್‌ಗೆ ಸಲ್ಲಿಸಿದ ‘ರಿಪೋಟ್ ಕಾರ್ಡ್’ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಲು ಪ್ರಮುಖ ಕಾರಣ ಎನ್ನಲಾಗಿದೆ.

ಈ ಎಲ್ಲ ವಿರೋಧದ ನಡುವೆಯೂ ಜನಪ್ರಿಯತೆ ಆಧಾರದ ಮೇಲೆ ಈ ಬಾರಿಯೂ ಟಿಕೆಟ್ ಪಡೆಯುತ್ತೇನೆ ಎಂಬ ವಿಶ್ವಾಸದಲ್ಲಿ ಪ್ರತಾಪ್ ಸಿಂಹ ಇದ್ದರು. ಆದರೆ, ಪ್ರತಾಪ್ ಸಿಂಹಗೆ ಶಾಕ್ ನೀಡಿದ ಪಕ್ಷದ ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಿದೆ. ಇದು ಪ್ರತಾಪ್ ಸಿಂಹ ಬೆಂಬಲಿಗರಲ್ಲಿ ತೀವ್ರ ಬೇಸರ ಮೂಡಿಸಿದರೂ ಬಿಜೆಪಿಯ ಬಹುತೇಕ ನಾಯಕರು ಮೊಗದಲ್ಲಿ ಸಂತಸ ಅರಳುವಂತೆ ಮಾಡಿರುವುದು ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net