ಕನ್ನಡಿಗರು ಭಾರತೀಯರೆಂಬ ತತ್ವ ಅಳವಡಿಸಿಕೊಳ್ಳಲಿ

10mdk01
Published on

ಕುಶಾಲನಗರ:

ಪ್ರವಾಸೋದ್ಯಮ ಬೆಳವಣಿಗೆ ಜತೆ ಕೊಡಗಿನ ಪರಿಸರವನ್ನೂ ಉಳಿಸುವ ಅಗತ್ಯವೂ ಇದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಪ್ರವಾಸಿಗರು ಕೊಡಗಿನ ಪರಿಸರ ಆಸ್ವಾದಿಸಲು ಬಯಸಿ ಇಲ್ಲಿಗೆ ಬರುತ್ತಾರೆ. ಹಾಗಾಗಿ ಇಲ್ಲಿನ ಪರಿಸರ ಉಳಿಸಿಕೊಳ್ಳುವ ಅಗತ್ಯ ಇದೆ. ಈ ಹಿಂದೆ ಇಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಜನಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತ್ತು. ಮುಂದೆ ಪ್ರಾಕೃತಿಕ ವಿಕೋಪ ಆಗಬಾರದೆಂದರೆ ಇಲ್ಲಿಯ ಪ್ರಕೃತಿ ಉಳಿಸುವ ಕಾಳಜಿ ಬೆಳೆಸಿಕೊಳ್ಳಬೇಕು ಎಂದರು.

ಭಾರತದಂತೆ ಕರ್ನಾಟಕವೂ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದು ನಾಡಿನ ಹಿತದೃಷ್ಟಿಯಿಂದ ಇದು ಹೀಗೆಯೇ ಮುಂದುವರಿಯುವ ಅಗತ್ಯ ಇದೆ. ಎಲ್ಲ ಕನ್ನಡಿಗರೂ ಭಾರತೀಯರು ಎನ್ನುವ ತತ್ವ ಇರಬೇಕು. ಕರ್ನಾಟಕ ಒಂದು ಮಿನಿ ಭಾರತ ರೀತಿಯಲ್ಲಿ ಇದೆ. ಭಾರತದಲ್ಲಿ ಇರುವ ವೈವಿಧ್ಯತೆ ಕರ್ನಾಟಕದಲ್ಲೂ ಇದೆ.

ಕಲೆ, ಸಾಹಿತ್ಯ, ಸಂಸ್ಕೃತಿ ರಕ್ಷಿಸಲು ಕಸಾಪ ಸ್ಥಾಪಿಸಲಾಯಿತು. ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸುವ ಉದ್ದೇಶವೂ ಇದರ ಹಿಂದೆ ಇತ್ತು. ಏಕೀಕರಣದ ಉದ್ದೇಶ ಇಟ್ಟುಕೊಂಡು ಆರಂಭವಾದ ಕಸಾಪ ತನ್ನ ಉದ್ದೇಶದಲ್ಲಿ ಸಾಫಲ್ಯ ಕಂಡುಕೊಂಡಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಮೊದಲಿಗೆ ಕನ್ನಡ ಉಳಿಸುವ ಕೆಲಸ ಆರಂಭಿಸಿದರು. ಭವಿಷ್ಯದ ದೂರದೃಷ್ಟಿ ಇಟ್ಟುಕೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಅನೇಕ ಸಂಘ - ಸಂಸ್ಥೆಗಳನ್ನು ಆರಂಭಿಸಿದರು.ಮುಂದಿನ ಪೀಳಿಗೆಗೆ ಅನುಕೂಲ ಆಗುವ ಇಂಥ ಯೋಜನೆ ಆರಂಭಿಸಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಸರ್ವರ ಸಹಕಾರದಿಂದ ಕುಶಾಲನಗರದಲ್ಲಿ ಕಸಾಪ ಚಟುವಟಿಕೆ ಚೆನ್ನಾಗಿ ನಡೆಯುತ್ತಿದೆ. ಕಸಾಪ ಬೆಳೆಸಿದ್ದು ಮೈಸೂರು ರಾಜಮನೆತನ. ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಭಾಷೆ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಕನ್ನಡತನ ಕೊಡಗಿನವರ ವ್ಯಕ್ತಿತ್ವದ ಒಂದು ಅಂಗ ಎಂದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕಸಾಪದ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರ ನೀಡಲಾಗುವುದು. ಅಭಿವೃದ್ಧಿ ಯೋಜನೆ ಮೂಲಕ ಜನ ಮನ ಗೆಲ್ಲಬೇಕು ಎನ್ನುವ ದೃಷ್ಟಿಕೋನದಿಂದ ಕೆಲಸ ಮಾಡಲಾಗುವುದು. ಆದಷ್ಟು ಶೀಘ್ರ ಕಲಾಭವನ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಭಾಷೆ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿ ಇರಬೇಕು ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಟಿ.ವಿ. ಶೈಲಾ, ಉ.ರಾ. ನಾಗೇಶ್, ಹೇಮಲತಾ, ಲೀಲಾಕುಮಾರಿ ತೊಡಿಕಾನ ಮತ್ತಿತರರು ಇದ್ದರು. ಉಮಾದೇವಿ ಮತ್ತು ತಂಡ ನಾಡಗೀತೆ ಪ್ರಸ್ತುತ ಪಡಿಸಿತು. ಬಸವರಾಜು ಮತ್ತು ಶಿಕ್ಷಕರ ತಂಡ ನಾಡ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net