

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಷಿಕಾ ಅವರೊಂದಿಗೆ ಸೋಮವಾರ ನಗರದ ಮಹಾರಾಜ ಕಾಲೇಜು ಮೈದಾನ ಸ್ವಚ್ಛತಾ ಕಾರ್ಯ ನಡೆಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಕೂಟ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ’ ಆಯೋಜಿಸಲಾಗಿತ್ತು. ಸಾವಿರಾರು ಜನರು ಸೇರಿದ್ದರಿಂದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ, ಪೇಪರ್ ಗ್ಲಾಸ್ ಸೇರಿದಂತೆ ಇನ್ನಿತರ ತ್ಯಾಜ್ಯ ಎಲ್ಲೆಡೆ ಹರಡಿತ್ತು.
ಸೋಮವಾರ ಬೆಳಗ್ಗೆ ನಗರಪಾಲಿಕೆ ಪೌರಕಾರ್ಮಿಕರು, ಕೆಲ ಸಂಘಟನೆಗಳ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಆ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ ಯದುವೀರ್ ದಂಪತಿ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ಇಬ್ಬರೂ ಕಸವನ್ನು ಹಾಯ್ದು ಚೀಲದಲ್ಲಿ ತುಂಬಿ, ಅದನ್ನು ಪಾಲಿಕೆಯ ಕಸ ಸಂಗ್ರಹ ವಾಹನಕ್ಕೆ ನೀಡಿದರು.
ಯದುವೀರ್ ಮಾತನಾಡಿ, ‘ನಗರ ಯಾವಾಗಲೂ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ನಂತರ ಮೈದಾನವನ್ನು ಸ್ವಚ್ಛಗೊಳಿಸುವುದು ನನ್ನ ಕರ್ತವ್ಯವಾಗಿದೆ. ನಗರವನ್ನು ಸ್ವಚ್ಛವಾಗಿ ಇಡಬೇಕು. ಇದು ಪ್ರಧಾನಿ ಅವರ ಸ್ವಚ್ಛ ಭಾರತ್ ಅಭಿಯಾನಕ್ಕೆ ಪೂರಕವಾಗಿದೆ. ಮೈಸೂರು ನಗರದ ಸ್ವಚ್ಛತೆಗೆ ನನ್ನ ಮೊದಲ ಆದ್ಯತೆ’ ಎಂದು ತಿಳಿಸಿದರು.