ಕಾವೇರಿ ಮಾತೆಗೆ ಯದುವೀರ್ ಪೂಜೆ

Yaduveer Puja to Mother Kaveri
Published on

ಮಡಿಕೇರಿ:

ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರದಿಂದ ಕೊಡಗಿನಲ್ಲಿ ಅಧಿಕೃತ ಪ್ರಚಾರ ಆರಂಭಿಸಿದರು. ಕಾವೇರಿ ಉಗಮಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಯಲ್ಲಿ ಮಾತೆ ಕಾವೇರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುವ ಮೂಲಕ ಪ್ರಚಾರ ಕಣಕ್ಕೆ ಅಡಿಯಿಟ್ಟರು. ಇದಕ್ಕೂ ಮೊದಲು ಶ್ರೀಕ್ಷೇತ್ರದ ಮಹಾಗಣಪತಿ, ಅಗಸ್ತ್ಯೇಶ್ವರ ಸನ್ನಿಧಿಯಲ್ಲೂ ಬಿಜೆಪಿ ಪದಾಧಿಕಾರಿಗಳ ಜತೆಗೂಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜೆ, ಪ್ರಾರ್ಥನೆ ನಂತರ ತಲಕಾವೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯದುವೀರ್, ಕಾವೇರಿ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ ನಮ್ಮ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಾಳೆ. ಹಾಗಾಗಿಯೇ ತಾಯಿಯಾಗಿ ಆಕೆಯನ್ನು ಆರಾಧನೆ ಮಾಡಲಾಗುತ್ತದೆ. ಯಶಸ್ವಿ ಚುನಾವಣೆಯ ಜತೆಗೆ ದೇಶದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ, ಅಭಿವೃದ್ಧಿ ಆಗಲಿ, ಜನರು ಆರೋಗ್ಯವಾಗಿರಲಿ ಎಂದು ಮಾತೆ ಕಾವೇರಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ರಾಜ, ರಾಣಿಯಂತಹ ಪದವಿಗಳನ್ನೆಲ್ಲಾ ಸ್ವಾತಂತ್ರ್ಯಕ್ಕೂ ಮೊದಲೇ ವಿಸರ್ಜನೆ ಮಾಡಲಾಗಿದೆ. ಹಾಗಾಗಿ ಪ್ರಜಾಪ್ರಭುತ್ವದಲ್ಲಿ ನಾನು ಕೂಡ ಸಾಮಾನ್ಯ ವ್ಯಕ್ತಿ. ನಾನು ಅಭ್ಯರ್ಥಿ ಆದ ನಂತರ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಮ್ಮ ಪಕ್ಷದವರು ಸೇರಿದಂತೆ ಎಲ್ಲರೂ ನಮ್ಮ ಜತೆ ಭಾಗವಹಿಸುತ್ತಿದ್ದಾರೆ. ಈಗಾಗಲೇ ಹೇಳಿರುವಂತೆ ಪ್ರತಾಪ್ ಸಿಂಹ ಕಳೆದ ೧೦ ವರ್ಷಗಳಲ್ಲಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. ಅವರು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಮುಂದೆ ಅವರ ಮಾರ್ಗದರ್ಶನವನ್ನೂ ತೆಗೆದುಕೊಳ್ಳಲಾಗುವುದು. ಪ್ರತಾಪ್ ಸಿಂಹ ಅಥವಾ ಇನ್ಯಾರನ್ನು ಪ್ರಚಾರಕ್ಕೆ ಕರೆಯಬೇಕು ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಅದೇ ರೀತಿಯಲ್ಲಿ ಮುಂದುವರಿಯಲಾಗುವುದು ಎಂದರು.

ಕಾಂಗ್ರೆಸ್ ಅಭ್ಯರ್ಥಿಯಗಿ ಲಕ್ಷ್ಮಣ್ ಹೆಸರು ಘೋಷಣೆ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯದುವೀರ್, ಲಕ್ಷ್ಮಣ್ ಆಯ್ಕೆಯನ್ನು ಸ್ವಾಗತಿಸಲಾಗುವುದು. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ನಮ್ಮಗಳ ಸಾಮರ್ಥ್ಯ ಮತ್ತು ಯೋಗ್ಯತೆ ಆಧಾರದಲ್ಲಿ ಮುಂದೆ ಜನ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಎಂಎಲ್‌ಸಿ ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಒಬಿಸಿ ಮೋರ್ಚಾ ಅಧ್ಯಕ್ಷ ಅಪ್ರುರವೀಂದ್ರ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನೆಲ್ಲೀರ ಚಲನ್ ಕುಮಾರ್, ವಕ್ತಾರರಾದ ತಳೂರು ಕಿಶೋರ್ ಕುಮಾರ್, ಬಿ.ಕೆ. ಅರುಣ್ ಕುಮಾರ್, ಸುಬ್ರಮಣ್ಯ ಉಪಾಧ್ಯಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಭಾಗಮಂಡಲ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಮುಖರಾದ ಕಾಂಗೀರ ಸತೀಶ್, ಕಾರೇರ ಕವನ್ ಕಾವೇರಪ್ಪ, ಪಿ.ಡಿ. ಪೊನ್ನಪ್ಪ, ಡೀನ್ ಬೋಪಣ್ಣ, ಬಿ.ಎಂ. ಹರೀಶ್ ಸೇರಿದಂತೆ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net