ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಯದುವೀರ್

yaudveer beti
Published on

ಮಡಿಕೇರಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದ ಯದುವೀರ್ ಒಡೆಯರ್ ಅವರನ್ನು ಕೊಡಗು ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಸನ್ಮಾನಿಸಿ ಅಭಿನಂದಿಸಿತು.


ಮೈಸೂರಿನ ಕುವೆಂಪು ನಗರದಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಅವರ ನೇತೃತ್ವದ ನಿಯೋಗ ಸಂಸದ ಯದುವೀರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿ, ಗೆಲುವಿನ ಹರ್ಷವನ್ನು ಹಂಚಿಕೊಂಡಿತು.


ಈ ಸಂದರ್ಭ ಮಾತನಾಡಿದ ಯದುವೀರ್ ಅವರು ಗೆಲುವಿಗಾಗಿ ಶ್ರಮಿಸಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಕೊಡಗು ಜಿಲ್ಲೆಯ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ ಅವರು, ಜಿಲ್ಲೆಯಲ್ಲಿ ಸಂಸದರ ಕಚೇರಿ ತೆರೆದು ಜನರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಏನೇ ಸಮಸ್ಯೆಗಳಿದ್ದರೂ ತಮ್ಮ ಆಪ್ತ ಸಹಾಯಕರ ಮೂಲಕ ನನ್ನ ಗಮನ ಸೆಳೆಯಿರಿ ಎಂದು ತಿಳಿಸಿದರು.


ಅಪ್ರು ರವೀಂದ್ರ ಮಾತನಾಡಿ, ನೂತನ ಸಂಸದರಿಂದ ಕೊಡಗಿನ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಿದೆ. ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ದೊರೆಯುತ್ತದೆ ಎನ್ನುವ ವಿಶ್ವಾಸ ಮೂಡಿದೆ ಎಂದರು.


ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ಪೂಜಾರಿ, ರಘು ಶನಿವಾರಸಂತೆ, ಉಪಾಧ್ಯಕ್ಷರುಗಳಾದ ತಿಮ್ಮಪ್ಪ, ರಾಜ ಚಂದ್ರಶೇಖರ್, ಗಂಗಾಧರ್, ಕೋಲೆಯಂಡ ಗಿರೀಶ್, ಕಾರ್ಯಾಕಾರಿಣಿ ಸದಸ್ಯರುಗಳಾದ ಉಮಾ ಪ್ರಭು, ನಳಿನಿ, ಭವ್ಯಶ್ರಿ, ಸರಸ್ವತಿ, ಸುಧೀಶ್, ತಾಲೂಕು ಮತ್ತು ಗ್ರಾಮಾಂತರ ಅಧ್ಯಕ್ಷರು ಹಾಗೂ ಮಂಡಲ ಅಧ್ಯಕ್ಷರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net