

ಮೈಸೂರು: ರಾಜಕೀಯ ಲಾಭಕೋಸ್ಕರ ರಾಜ್ಯ ಸರ್ಕಾರ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ಹೆಮ್ಮೆಯ ಹುಲಿಸಂರಕ್ಷಿತ ಪ್ರದೇಶವಾಗಿದೆ. ರಾಜರ ಕಾಲದಿಂದಲೇ ಜೀವವೈವಧ್ಯ ತಾಣವಾಗಿ ಉಳಿಸಿಕೊಂಡು ಬರಲಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಹುಲಿ ಸಂರಕ್ಷಣೆಗೋಸ್ಕರ ಹುಲಿ ಯೋಜನೆ ಜಾರಿಗೆ ತಂದರು. ಇದು ಸಮಸ್ತ ಭಾರತೀಯರು ಮೆಚ್ಚಿರುವ ಯೋಜನೆಯಾಗಿದೆ. ಈ ಯೋಜನೆಯ ಕೇಂದ್ರ ಸ್ಥಾನ ಬಂಡೀಪುರದಲ್ಲಿ ಇದೆ. ಇದೀಗ ಇಂದಿರಾಗಾಂಧಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ವಯನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಗೆಲುವಿಗೋಸ್ಕರ ಡಿ.ಕೆ. ಶಿವಕುಮಾರ್ ರಾತ್ರಿ ಸಂಚಾರ ನಿಷೇಧ ಹಿಂಪಡೆಯಲು ಮುಂದಾಗಿರುವುದು ಸರಿಯಲ್ಲ. ರಾಜಕೀಯ ಲಾಭಕೋಸ್ಕರ ಕನ್ನಡಿಗರ ಸಂಪತ್ತು ಬಿಟ್ಟುಕೊಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.