ಕಾಫಿ ಬೆಳೆಗಾರರ ಸಹಕಾರ ಸಂಘದ ಬಗ್ಗೆ ಸಂಸದರ ಕಾಳಜಿ

yaduveer
Published on

ಮಡಿಕೇರಿ:

ದಶಕಗಳ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಿರುವ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲು ಸಂಕಲ್ಪ ತೊಟ್ಟಿರುವ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಕೇಂದ್ರ ವಾಣಿಜ್ಯ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಮಧ್ಯ ಪ್ರವೇಶಿಸಿ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಈಗ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಇದಕ್ಕೆ ಪರಿಹಾರ ದೊರಕಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡಿರುವ ಸಂಸದ ಯದುವೀರ್, 1956 ರಲ್ಲಿ ಸ್ಥಾಪನೆಯಾದ ಕಾಫಿ ಬೆಳೆಗಾರರ ಸಹಕಾರ ಸಂಘ, ಕೊಡಗು, ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಗೆ ಸಾಕಷ್ಟು ಬೆಂಬಲ ಒದಗಿಸಿದೆ. ಸುಮಾರು 40 ಕುಟುಂಬಗಳಿಗೆ ಬೆನ್ನೆಲುಬಾಗಿದೆ. ಸಾವಿರಾರು ಎಸ್ಟೇಟ್ ಕಾರ್ಮಿಕರಿಗೆ ಉದ್ಯೋಗ ನೀಡಿದೆ. ಇಂಥ ಸಂಘ ಮಾರುಕಟ್ಟೆ ಏರಿಳಿತಗಳು ಹಾಗೂ ಬಂಡವಾಳದ ಕೊರತೆಯಿಂದಾಗಿ, 1995-96 ರಲ್ಲಿ 6.85 ಕೋಟಿ ರೂ. ನಷ್ಟ ಅನುಭವಿಸಿತು ಎಂದು ಸಚಿವರ ಗಮನ ಸೆಳೆದಿದ್ದಾರೆ.

ಕಾಫಿ ಮಂಡಳಿ 2011ರ ಸೆ. 12ರಂದು ನೀಡಿದ ತೀರ್ಪಿನ ಪ್ರಕಾರ ಸೊಸೈಟಿ 1.55 ಕೋಟಿ ರೂ. ಬಡ್ಡಿ ಪಾವತಿಸಲು ಸೂಚಿಸಿತ್ತು. ನಂತರ ಕಾಫಿ ಮಂಡಳಿ 2015ರ ಸೆ. 20ರಂದು ಪತ್ರ ಬರೆದು, ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ಅವಕಾಶ ಒದಗಿಸಿತ್ತು. ಅದರನ್ವಯ ಸೊಸೈಟಿ 2015ರ ಡಿ.22 ರಂದು 1.55 ಕೋಟಿ ರೂ. ಪಾವತಿಸಿತು. ಆದರೆ 2017ರಲ್ಲಿ ಕಾಫಿ ಮಂಡಳಿಯು 5.83 ಕೋಟಿ ರೂ. ಬಡ್ಡಿ ವಿಧಿಸಿ ಮತ್ತು ಹೆಚ್ಚಿನ ಮೊತ್ತದ ವೆಚ್ಚವನ್ನು ಪಾವತಿಸಲು ಪತ್ರ ಬರೆಯಿತು ಎಂದು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದ್ದಾರೆ.

ಸೊಸೈಟಿ ಈಗ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು 13.13 ಕೋಟಿ ರೂ. ನಷ್ಟ ಅನುಭವಿಸಿದೆ. ಈ ಸಂದರ್ಭದಲ್ಲಿ ಬಡ್ಡಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಬಡ್ಡಿ ಪಾವತಿಸಿದರೆ ಸೊಸೈಟಿ ಆರ್ಥಿಕವಾಗಿ ದಿವಾಳಿಯಾಗಲಿದೆ. ಇದರಿಂದ ಸುಮಾರು ಒಂದು ಲಕ್ಷ ಜನರು ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ನಿಟ್ಟಿನಲ್ಲಿ ವಾಣಿಜ್ಯ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಸೊಸೈಟಿಯನ್ನು ಆರ್ಥಿಕ ಸಂಕಷ್ಟದಿAದ ಪಾರು ಮಾಡಬೇಕು ಎಂದು ಮನವಿ ಮಾಡಲಾಗಿದೆ. ಈ ಸಂಬAಧ ಹಣಕಾಸು ಸಚಿವಾಲಯ ಜೊತೆಗೆ ಸಮನ್ವಯ ಸಾಧಿಸಿ ಸಂಸ್ಥೆಗೆ ಸೂಕ್ತ ಪರಿಹಾರ ಹಾಗೂ ನೆರವು ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಮನವಿ ಸ್ವೀಕರಿಸಿದ ಸಚಿವರು ಕೂಡಲೇ ಈ ಸಂಬAಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net