ಬಾಂಗ್ಲಾ ವಲಸಿಗರ ಬಗ್ಗೆ ಗೃಹ ಸಚಿವರಿಗೆ ಮಾಹಿತಿ

yaduveer
Published on

ಮಡಿಕೇರಿ:

ಆಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಬಗ್ಗೆ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೆ ತಂದಿದ್ದಾರೆ. ಶನಿವಾರ ನವದೆಹಲಿಯಲ್ಲಿ ಭೇಟಿಯಾಗಿ ಈ ಮಾಹಿತಿ ನೀಡಲಾಗಿದೆ.

ಈ ವಿಷಯದ ಕುರಿತು ಗೃಹ ಸಚಿವಾಲಯದಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಆಲಿಸಿದ ಗೃಹ ಸಚಿವ ಅಮಿತ್ ಶಾ, ಕಾಲಮಿತಿಯಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಯದುವೀರ್ ಒಡೆಯರ್ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಬಿಡುಗಡೆ ಮಾಡುವ ಬಗ್ಗೆ ಗೃಹ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆಸ್ತಿಪಾಸ್ತಿ ನಷ್ಟವಾಗಿದೆ. ಇವುಗಳಿಗೆ ಎನ್‌ಡಿಆರ್‌ಎಫ್ ಮೂಲಕ ಪರಿಹಾರ ಒದಗಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು. ಕೊಡಗು ಜಿಲ್ಲೆಯಾದ್ಯಂತ ಈ ಬಾರಿ ಅತಿ ಹೆಚ್ಚು ಮಳೆಯಾಗಿದೆ. ಇದಕ್ಕಾಗಿ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ವಿವರಿಸಲಾಯಿತು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದರೆ, ತಡೆಗೋಡೆಗಳನ್ನು, ರಸ್ತೆಗಳನ್ನು ದುರಸ್ತಿ ಮಾಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಲಾಯಿತು.

ತಂಬಾಕು ಮತ್ತು ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಮಳೆಯಿಂದ ಆಗಿರುವ ನಷ್ಟಕ್ಕೆ ಪರಿಹಾರ ದೊರಕಿಸಿಕೊಡಬೇಕು ಎಂದು ಗೃಹ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net