

ಮಡಿಕೇರಿ
ಕಾಡಿನ ವಾಸಿಗಳಾದ ನಾವು ದಶಕಗಳಿಂದಲೂ ಎದುರಿಸುತ್ತಾ ಬಂದಿರುವ ಸಮಸ್ಯೆಗಳಿಗೆ ಅಂತ್ಯ ಹಾಡಿ ನೀವಾದರೂ ಪುಣ್ಯ ಕಟ್ಟಿಕೊಳ್ಳಿ ಸರ್...ಇದು
ದುಬಾರೆ ಗಿರಿಜನ ಹಾಡಿಗೆ ಶುಕ್ರವಾರ ಭೇಟಿ ನೀಡಿದ ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಎದುರು ಇಲ್ಲಿಯ ನಿವಾಸಿಗಳು ತಮ್ಮ ಸಮಸ್ಯೆಯ ಮನವಿ ಮಾಡಿಕೊಂಡರು.ಗಿರಿಜನ ಮುಖಂಡ ಆರ್.ಕೆ. ಚಂದ್ರು ನೇತೃತ್ವದಲ್ಲಿ ಹಾಡಿ ವಾಸಿಗಳು ಸ್ಥಳಿಯ ಸಮಸ್ಯೆಯನ್ನು ಸಂಸದರ ಮುಂದೆ ಎಳೆ ಎಳೆಯಾಗಿಮ ಬಿಚ್ಚಿಟ್ಟರು. ಗಿರಿಜನ ಹಾಡಿಯ ನಿವಾಸಿಗಳೂ ಆದ ಸಾಕಾನೆ ಶಿಬಿರದ ದಿನಗೂಲಿ ನೌಕರರಾ ಜೆ.ಟಿ. ಈರ, ವಿಜಯ, ಮಣಿ, ಶಿವು, ರಾಜಾ ಮತ್ತಿತರರು ಸಂಸದರ ಬಳಿ ಬಂದು, ನಮ್ಮ ದುಬಾರೆ ಹಾಡಿಗೆ ಈ ಹಿಂದೆ ಬಂದಿರುವ ಹಲವು ಜನಪ್ರತಿನಿಧಿಗಳ ಬಳಿ ನಮ್ಮಗಳ ಸಮಸ್ಯೆಗಳನ್ನು ಹೇಳಿಕೊಂಡು ಸಾಕಾಗಿ ಹೋಗಿದೆ. ಯಾರೂ ಊತನಕ ಬಗೆಹರಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಮಹಾರಾಜರಾದ ನಿಮಗೆ ನಾಡಿನ ಬಡವರ, ದುರ್ಬಲ ವರ್ಗದವರ ನೋವನ್ನು ಪರಿಹರಿಸುವ ಶಕ್ತಿ ಹಾಗೂ ಸಾಮರ್ಥ್ಯವಿರುವ ಕಾರಣ ದಯಮಾಡಿ ನಮಗೆ ಸ್ಪಂದಿಸಿ ಬಗೆಹರಿಸಿ ಎಂದು ಮನವಿ ಮಾಡಿಕೊಂಡರು.
ಗಿರಿಜನರ ಎಲ್ಲಾ ಸಮಸ್ಯೆಗಳನ್ನು ಶಾಂತಚಿತ್ತರಾಗಿ ಆಲಿಸಿದ ಸಂಸದ ಯದುವೀರ್ ಪ್ರತಿಕ್ರಿಯಿಸಿ, ಇಡೀ ದೇಶಕ್ಕೆ ಶುದ್ಧವಾದ ಪರಿಸರವನ್ನು ಕೊಡುಗೆ ನೀಡಿರುವ ಪಶ್ಚಿಮಘಟ್ಟಗಳ ಸಾಲಿನಲ್ಲಿನ ನಿಮ್ಮಂಥ ಜನರ ಪರಿಶ್ರಮದಿಂದ ಬೆಳೆಸಿದ ಹಸಿರು ಕಾಡಿನಿಂದಾಗಿ ನಾಡು ಉಸಿರಾಡುತ್ತಿದೆ. ಸಾಕಾನೆ ಶಿಬಿರಕ್ಕೆ ಅಗತ್ಯವಿರುವ ರಸ್ತೆ, ವಿದ್ಯುತ್ ಹಾಗೂ ಮನೆಗಳ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳು ಹಾಗೂ ಅನುದಾನದ ಜತೆಗೆ ರಾಜ್ಯ ಸರ್ಕಾರದ ವಿಶ್ವಾಸ ಪಡೆದು ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ಕೊಡಗಿನಲ್ಲಿ ಅರಣ್ಯ ಹಾಗೂ ಹಸಿರು ಪರಿಸರ ಸಮೃದ್ಧವಾಗಿದ್ದರೆ ಅದಕ್ಕೆ ಕಾಡಿನ ಮಕ್ಕಳಾದ ನೀವೇ ಕಾರಣ. ಸಾಕಾನೆ ಶಿಬಿರಕ್ಕೆ ಮಾಲ್ದಾರೆ ಮಾರ್ಗವಾಗಿ ಅಗತ್ಯವಿರುವ ರಸ್ತೆ ನಿರ್ಮಿಸಲು ಕೇಂದ್ರ ಹಾಗೂ ರಾಜ್ಯದ ಅರಣ್ಯ ಪರಿಸರ ಸಚಿವಾಲಯದ ಅಧಿಕಾರಿಗಳ ಜತೆ ಚರ್ಚಿಸಿ ನಿಮ್ಮ ಯಾತನೆಗಳ ಮನದಟ್ಟು ಮಾಡಿ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು.
ಮಳೆಗಾಲದಲ್ಲಿ ಕಾವೇರಿ ನದಿ ಪ್ರವಾಹ ಬಂದಾಗ ದುಬಾರೆ ಹಾಡಿಯ ನಿವಾಸಿಗಳು ಸೇರಿದಂತೆ ಇಲ್ಲಿನ ಆನೆಗಳ ಮಾವುತರು, ಕಾವಾಡಿಗಳ ಕುಟುಂಬದ ಹಿತದೃಷ್ಟಿಯಿಂದ ದಶಕಗಳ ಬೇಡಿಕೆಯಾಗಿಯೇ ಉಳಿದಿರುವ ತೂಗು ಸೇತುವೆ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಕಾನೆ ಶಿಬಿರಕ್ಕೆ ಸಂಸದ ಯದುವೀರ್ ಆಗಮಿಸಿದ ವೇಳೆ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಸ್ವಾಗತಿಸಿ ಯಾಂತ್ರಿಕ ದೋಣಿಯಲ್ಲಿ ಕಾವೇರಿ ನದಿಯನ್ನು ದಾಟಿಸಿ ಶಿಬಿರಕ್ಕೆ ಕರೆತಂದರು. ಈ ವೇಳೆ ಸಂಸದರು ಸಾಕಾನೆಗಳಿಗೆ ಸಿಹಿ ಬೆಲ್ಲ ತಿನ್ನಿಸಿದರು. ಇದಕ್ಕೂ ಮೊದಲು ಕಾವಾಡಿ ಹಾಗೂ ಮಾವುತರು ಸಂಸದರೊAದಿಗೆ ಪೋಟೋ ತೆಗೆಸಿಕೊಂಡು ಖುಷಿಪಟ್ಟರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಪೂವಯ್ಯ, ಭಜರಂಗದಳದ ಜಿಲ್ಲಾ ಸಂಚಾಲಕ ಪ್ರವೀಣ್, ನಂಜರಾಯಪಟ್ಟಣದ ನವೀನ್ ಗಣಪತಿ, ಕೆ.ಎಸ್.ರತೀಶ್, ವಿಜು ಚೆಂಗಪ್ಪ ಮತ್ತಿತರರಿದ್ದರು.
ದುಬಾರೆಯಿಂದ ಮಡಿಕೇರಿ ತಾಲೂಕು ಮಕ್ಕಂದೂರಿಗೆ ಆಗಮಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಲ್ಲಿ ಗೋ ಪೂಜೆ ಮಾಡುವ ಮೂಲಕ ಮಡಿಕೇರಿ ಗ್ರಾಮಾಂತರ ಮಂಡಲ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಬಿಜೆಪಿ ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಹ್ಮಣಿ, ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಬಿ.ಎ. ಹರೀಶ್ ಮತ್ತಿತರರು ಇದ್ದರು. ಇದಕ್ಕೂ ಮೊದಲು ಮಹಿಳೆಯರು ಸಂಸದರನ್ನು ಕಳಶದೊಂದಿಗೆ ಸ್ವಾಗತಿಸಿದರು.
ನಂತರ ಮಡಿಕೇರಿ ತಾಲೂಕು ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷ ಕಟ್ಟುವ ಮೂಲಕ ಸಶಕ್ತ ಭಾರತ ನಿರ್ಮಾಣ ಮಾಡಲು ಕಾರ್ಯಕರ್ತರಿಗೆ ಕರೆ ಕೊಟ್ಟರು. ಇದೇ ಸಂದÀರ್ಭದಲ್ಲಿ ಗ್ರಾಮಸ್ಥರ ವಿವಿಧಬೇಡಿಕೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದರು. ಹಾಕತ್ತೂರು, ಮೇಕೇರಿ, ಮರಗೋಡು, ಹೊಸ್ಕೇರಿ, ಕಡಗದಾಳು ಹಾಗೂ ಮಡಿಕೇರಿ ನಗರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಸಂಸದರು ಪಾಲ್ಗೊಂಡಿದ್ದರು.