ದೇವಾಲಯಗಳ ಬೀಡು ಯಡೂರು

01
Published on

ಸೋಮವಾರಪೇಟೆ: ದೇವಾಲಯಗಳ ಗ್ರಾಮ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಯಡೂರು ಗ್ರಾಮ ಪ್ರಾಚೀನ ಗ್ರಾಮವಾಗಿದೆ.

ಕ್ರಿ.ಶ.1050ರ ನಂತರ ಕದಂಬ ವಂಶದ ಒಂದನೇ ಜಯಕೇಶಿ, ಹರಿಕೇಸರಿ, ದುದ್ದರಸ, ಜುಂಬರಸ, ಆಳಿದ ಬಗ್ಗೆ ಕ್ರಿ.ಶ.1175ರ ನಂದಿಗುಂದ ಶಾಸನದಲ್ಲಿ ತಿಳಿದು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. 14ನೇ ಶತಮಾನದ ನಂತರ ಚೆಂಗಳ್ವರು 100 ವರ್ಷ ಈ ಗ್ರಾಮವನ್ನು ಆಳಿದ್ದಾರೆ ಎನ್ನಲಾಗಿದ್ದು, ಮಲ್ಲನಾಯಕನ ಹೆಸರು ಯಡೂರು ಶಾಸನದಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.

ಯಡೂರು ಗ್ರಾಮದ ಗ್ರಾಮದೇವತೆ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವದಲ್ಲಿ ಸುಗ್ಗಿಕಟ್ಟೆಯಲ್ಲಿ ಪ್ರಾಚೀನ ಕೆಲ ಪದ್ಧತಿಗಳ ಸಾಮ್ಯತೆ ಇಂದಿನ ಪೂಜಾ ನಿಯಮಗಳಲ್ಲಿ ಕಾಣ ಸಿಗುತ್ತವೆ. ಈ ಹಿಂದೆ ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನು ಎಡೆ ಮಾಡಲಾಗುತ್ತಿತ್ತು. ಈಗ ಕಟ್ಟುನಿಟ್ಟಿನ ಕಾನೂನು ಇರುವುದರಿಂದ, ಹಲಸಿನ ಕಾಯಿಗೆ ಗುಂಡು ಹೊಡೆದು ದೇವರಿಗೆ ಎಡೆ ಇಡಲಾಗುತ್ತದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ಗ್ರಾಮದಲ್ಲಿ 150 ಕುಟುಂಬಗಳಿವೆ, ಅವುಗಳಲ್ಲಿ 120 ಕುಟಂಬಗಳು ಕೃಷಿಯನ್ನೇ ಅವಲಂಬಿಸಿವೆ. ಈ ಗ್ರಾಮದಲ್ಲಿ ಹತ್ತು ದೇವಾಲಯಗಳಿದ್ದು, ಒಂಬತ್ತು ದೇವಾಲಯಗಳ ಪೂಜೆಯನ್ನು ಒಕ್ಕಲಿಗರ ಜನಾಂಗದ ಡಿ.ಟಿ.ಲಿಂಗಪ್ಪ ಪೂಜೆ ನೆರವೇರಿಸುತ್ತಾರೆ. ಶ್ರೀ ಸಬ್ಬಮ್ಮ ತಾಯಿ, ಬಸವೇಶ್ವರ, ಮಾರಿಯಮ್ಮ, ಈಶ್ವರ ದೇವಾಲಯ, ಬಸವಣ್ಣ ಗುಡಿ, ಬೋರೇದೇವರ ಗುಡಿ, ಬೀರದೇವರ ಗುಡಿ, ಹೆದ್ದೆವರು ಗುಡಿ, ಮಜ್ನೆದೇವರ ಗುಡಿಗಳಿವೆ.

ಏಪ್ರಿಲ್ ತಿಂಗಳಲ್ಲಿ 15 ದಿನ ನಡೆಯುವ ಸುಗ್ಗಿ ಉತ್ಸವದಲ್ಲಿ ಎಲ್ಲ ದೇವರಗಳನ್ನು ಪೂಜೆ ಮಾಡಲಾಗುತ್ತದೆ. 15 ದಿನಗಳ ಕಾಲ ಇಡೀ ಗ್ರಾಮದ ಕುಟುಂಬಗಳು ಕಠಿಣ ವ್ರತಗಳನ್ನು ಆಚರಿಸಲಾಗುತ್ತವೆ. ಪ್ರಕೃತಿ ರಕ್ಷಣೆಯ ಪ್ರತೀಕ ಎಂಬಂತೆ 15 ದಿನಗಳ ಕಾಲ ಹಸಿ ಮರಗಳನ್ನು ಕಡಿಯುವುದಿಲ್ಲ. ಒಣಕಡ್ಡಿ ಮುರಿಯುವುದಿಲ್ಲ. ನಕ್ಷತ್ರ ಕಾಣುವ ತನಕ ಯಾರನ್ನು ಮನೆಯ ಮೆಟ್ಟಿಲು ಹತ್ತಿಸುವುದಿಲ್ಲ. ಪಟ್ಟಣದಲ್ಲಿ ಊಟ ಮಾಡುವಂತಿಲ್ಲ. ಇಂತಹ ಅನೇಕ ಕಟ್ಟುಕಟ್ಟಲೆಯೊಂದಿಗೆ 15 ದಿನದ ಸುಗ್ಗಿ ಉತ್ಸವವನ್ನು ಆಚರಿಸುತ್ತಾರೆ.

ಹಳ್ಳಿಯ ಹಿನ್ನೆಲೆ ಏನು?

ಗ್ರಾಮದಲ್ಲಿ ಕೊಲೆಕಲ್ಲುಗಳ ಸಮೂಹವಿರುವ ಗ್ರಾಮದಲ್ಲಿ ಮಾಳದ ಹಬ್ಬದಲ್ಲಿ ಪಿತೃಗಳಿಗೆ ಎಡೆ ಹಾಕುವುದು ರೂಢಿಯಾಗಿ, ಪ್ರಚಲಿತಗೊಂಡು ಎಡೆಯೂರು, ಎಡೂರು, ಯಡೂರು ಆಗಿರಬಹುದು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಈಗಲೂ ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವದಲ್ಲಿ ಸುಗ್ಗಿಕಟ್ಟೆಯಲ್ಲಿ ಎಡೆ ಇಡುತ್ತಾರೆ. ನಂತರ ಗ್ರಾಮಸ್ಥರಿಗೆ ಪ್ರಸಾದದ ರೂಪದಲ್ಲಿ ಎಡೆಯನ್ನು ಹಂಚುತ್ತಾರೆ.

ಯಡೂರು ಐತಿಹಾಸಿಕ ಹಿನ್ನೆಲೆ ಹೊಂದಿರುವ ಪುರಾತನ ಗ್ರಾಮವಾಗಿದೆ. ಆದರೆ ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿ ರಸ್ತೆಗಳಿಲ್ಲದ ಗ್ರಾಮವೆಂದು ಖ್ಯಾತಿ ಪಡೆದಿದೆ ಗ್ರಾಮಸ್ಥರು ದೂರುತ್ತಾರೆ.

ಗ್ರಾಮಸ್ಥರು ವಂತಿಗೆ ಹಾಕಿಕೊಂಡು, ದಾನಿಗಳಿಂದ ಹಣ ಸಂಗ್ರಹಿಸಿಕೊಂಡು ಈಶ್ವರ ದೇವಾಲಯ ನಿರ್ಮಿಸಿದ್ದಾರೆ. 15 ದಿನಗಳ ಕಾಲ ನಡೆಯುವ ವಾರ್ಷಿಕ ಸುಗ್ಗಿ ಉತ್ಸವಕ್ಕೆ ಸರ್ಕಾರದಿಂದ ನಯಾಪೈಸೆ ಹಣ ಸಿಗುತ್ತಿಲ್ಲ. ಗ್ರಾಮಸ್ಥರೇ ವಂತಿಗೆ ಹಾಕಿ ಉತ್ಸವ ಮಾಡುತ್ತಾರೆ.

ಗ್ರಾಮದೇವತೆ ಶ್ರೀಸಬ್ಬಮ್ಮ ದೇವಿಯ ಸುಗ್ಗಿಕಟ್ಟೆಗೆ ತೆರಳುವ ರಸ್ತೆಯೇ ಗುಂಡಿಮಯವಾಗಿದೆ. ಮುಖ್ಯ ರಸ್ತೆಯಿಂದ ಮಾರುಗುಡಿ ತಲ್ತಾರೆ ಗ್ರಾಮ ಸಂಪರ್ಕ ರಸ್ತೆ ಹಾಳಾಗಿದೆ. 15 ವರ್ಷಗಳ ಹಿಂದೆ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ ರಸ್ತೆ ದುರಸ್ತಿಯಾಗಿಲ್ಲ. ಕೃಷಿಕರು ಈ ರಸ್ತೆಯನ್ನೇ ಅವಲಂಬಿಸಬೇಕು. ಭತ್ತದ ಗದ್ದೆಗಳಿಗೂ ಈ ರಸ್ತೆಯಲ್ಲೇ ತೆರಳಬೇಕು. ಮಳೆಗಾಲದಲ್ಲಿ ಹೊಂಡಮಯವಾಗುವ ರಸ್ತೆಗಳಲ್ಲಿ ಜಾನುವಾರುಗಳು ಓಡಾಡಲು ಸಾಧ್ಯವಾಗುತ್ತಿಲ್ಲ.

ಮಾವಿನಕಟ್ಟೆಯಿಂದ ಕಂಬಳ್ಳಿ ಗ್ರಾಮ ಸಂಪರ್ಕ ರಸ್ತೆ ಗುಂಡಿಮಯವಾಗಿದೆ. ಈ ರಸ್ತೆಯಿಂದಲೇ ಕೃಷಿ ಭೂಮಿಗೆ ಮತ್ತು ಮನೆಗಳಿಗೆ ತೆರಳಬೇಕಾಗಿದೆ. ಈ ರಸ್ತೆಯೂ ಡಾಂಬರು ಕಂಡು ಎರಡು ದಶಕಗಳು ಕಳೆದಿವೆ.

ಸೋಮವೇಶ್ವರ ದೇವಾಲಯ ರಸ್ತೆ ಹಾಗೂ ಬಿ.ಎನ್.ಆನಂದ್ ಅವರ ಮನೆಯಿಂದ ಮೋಟಯ್ಯ ಅವರ ಮನೆಯವರೆಗೂ ರಸ್ತೆ ಅಭಿವೃದ್ಧಿಯಾಗಬೇಕಿದೆ. ನಮ್ಮೂರಿನ ರಸ್ತೆಗಳಿಗೆ ಏಕೆ ಅನುದಾನ ನೀಡುತ್ತಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಗ್ರಾಮ ನಿವಾಸಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಗ್ರಾಮದ ಪ್ರಮುಖ ಕೆರೆಯಲ್ಲಿ ಹೂಳು ತುಂಬಿ, ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿರಲಿಲ್ಲ. ಇದನ್ನರಿತ ದಾನಿಗಳಾದ ಹರಪಳ್ಳಿ ರವಿಂದ್ರ ಅವರು 7ಲಕ್ಷ ರೂ.ವೆಚ್ಚದಲ್ಲಿ ಕೆರೆಯ ಹೂಳು ತೆಗೆಸಿ, ನೀರು ಸಂಗ್ರಹವಾಗುವಂತೆ ಮಾಡಿ, ರೈತರ ಪ್ರಶಂಸೆಗೆ ಭಾಗಿಯಾಗಿದ್ದಾರೆ. ಆದರೆ ಕೆರೆ ಏರಿಗೆ ರೇಲಿಂಗ್ಸ್ ಅಳವಡಿಸಲು ಲೋಕೋಪಯೋಗಿ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ.

ಸೋಮವಾರಪೇಟೆ, ಯಡೂರು, ಶಾಂತಳ್ಳಿ ಮಲ್ಲಳ್ಳಿ ಜಲಪಾತ ಮತ್ತು ಸಕಲೇಶಪುರಕ್ಕೆ ತೆರಳುವ ರಾಜ್ಯ ಹೆದ್ದಾರಿಯಾಗಿದೆ. ಮಳೆಗಾಲದಲ್ಲಿ ರಾಜ್ಯ ಹೆದ್ದಾರಿಯ ಮೇಲೆಯೇ ಕೆರೆಯ ನೀರು ಹರಿಯುತ್ತದೆ. ರಸ್ತೆ ಯಾವುದು, ಕೆರೆ ಯಾವುದೂ ಎಂಬುದು ಪ್ರವಾಸಿಗರಿಗೆ ಗೊತ್ತಾಗುವುದಿಲ್ಲ. ಅನಾಹುತವಾದರೆ ಲೋಕೋಪಯೋಗಿ ಇಲಾಖೆಗೆ ಹೊಣೆಯಾಗಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಕಾರ್ತಿಕ್ ಎಚ್ಚರಿಸಿದರು.

ಗ್ರಾಮದ ಮಧ್ಯದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿ ಡಾಂಬರೀಕರಣವಾಗಿರುವುದು ಬಿಟ್ಟರೆ, ಉಳಿದ ರಸ್ತೆಗಳು ಡಾಂಬರು ಕಂಡಿಲ್ಲ. ಊರಿಗೊಂದು ಸಮುದಾಯ ಭವನ, ಸ್ಮಶಾನಕ್ಕೆ ಜಾಗ, ಸ್ತ್ರೀಶಕ್ತಿ ಭವನ ಬೇಕು ಎಂದು ಗ್ರಾಮಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ವೈ.ಡಿ.ಬೆಳ್ಳಿಯಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೃಷಿಕರಿಗೆ ಸರ್ಕಾರಿ ಸೌಲಭ್ಯಗಳು ಸಿಗಬೇಕು. ಆಸ್ತಿ ಹಕ್ಕುಪತ್ರವನ್ನು ಪಡೆಯಲು ಕಂದಾಯ ಇಲಾಖೆಯಲ್ಲಿ ಹರಸಾಹಸ ಪಡಬೇಕಾಗಿದೆ. ಅತಿವೃಷ್ಟಿ, ಅಕಾಲಿಕ ಮಳೆಯಿಂದ ಪ್ರತಿ ವರ್ಷ ಕಾಫಿ, ಕಾಳುಮೆಣಸು ಫಸಲು ಕಳೆದುಕೊಳ್ಳುತ್ತಿದ್ದೇವೆ. ಸೂಕ್ತವಾದ ಪರಿಹಾರ ಸಿಗುತ್ತಿಲ್ಲ. ಕೃಷಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಪ್ರತಿವರ್ಷ ಪ್ರೋತ್ಸಾಹಧನ ನೀಡಬೇಕು. ಸಿ ಆ್ಯಂಡ್ ಡಿ ಜಾಗದ ಸಮಸ್ಯೆಯಿಂದ ಹಕ್ಕುಪತ್ರಗಳು ಸಿಗದೆ, ಯಾವುದೇ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ಪ್ರತಿ ರೈತ ಕುಟುಂಬಕ್ಕೆ ಬಿಪಿಲ್ ಕಾರ್ಡ್ ಸಿಗುವಂತಾಗಬೇಕು. ಸರ್ಕಾರ ದೊಡ್ಡ ಮಟ್ಟದ ತೆರಿಗೆ ಕಟ್ಟುತ್ತಿದ್ದೇವೆ. ನಮಗೂ ಸರ್ಕಾರದ ಸೌಲಭ್ಯಗಳು ಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದರು.

ಪ್ರಾಚೀನ ಗ್ರಾಮವನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಕೆಲಸವಾಗಿದೆ. ಗ್ರಾಮದೊಳಗಿನ ರಸ್ತೆಗಳು ಡಾಂಬರೀಕರಣಗೊಳ್ಳಬೇಕು. ಗ್ರಾಮದಲ್ಲಿರುವ ದೇವಾಲಯಗಳನ್ನು ನವೀಕರಣಗೊಳಿಸಲು ಸರ್ಕಾರದಿಂದ ಅನುದಾನ ಬೇಕು. ಸುಗ್ಗಿ ಉತ್ಸವಕ್ಕೆ ಸರ್ಕಾರ ವಾರ್ಷಿಕ ಅನುದಾನ ಕಲ್ಪಿಸಬೇಕು. ನಿಯಮಗಳನ್ನು ಸರಳೀಕರಣಗೊಳಿಸಿ ಪ್ರತಿಯೊಬ್ಬರಿಗೂ ಕೋವಿ ಪರವಾನಗಿ ನೀಡಬೇಕು. ಕೋವಿ ನಮ್ಮ ಸಾಂಪ್ರದಾಯಿಕ ಆಯುಧವಾಗಿದೆ. ಅಂತಿಮ ಸಂಸ್ಕಾರ ನಡೆಯುವುದು ಗುಂಡು ಹಾರಿಸುವ ಮೂಲಕವಾಗಿದೆ. ನಮ್ಮ ಸಂಸ್ಕೃತಿ ಉಳಿಸಬೇಕಾದರೆ ಪ್ರತಿ ಕುಟುಂಬದಲ್ಲೂ ಕೋವಿ ಇರಬೇಕು. ವೈ.ಡಿ.ಮೋಹನ್ ಕುಮಾರ್ ಅಧ್ಯಕ್ಷ, ಯಡೂರು ಗ್ರಾಮಾಭಿವೃದ್ಧಿ ಮಂಡಳಿ (1) ಯಡೂರು ಗ್ರಾಮಕ್ಕೆ ತೆರಳಿ ಗ್ರಾಮದ ರಸ್ತೆಗಳನ್ನು ನೋಡಿದ್ದೇನೆ. ಶ್ರೀ ಸಬ್ಬಮ್ಮದೇವಿ ಸುಗ್ಗಿಕಟ್ಟೆ ಹಾಗೂ ದೇವಾಲಯ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ನೀಡಲಾಗುವುದು. ಈಗಾಗಲೇ 15 ಲಕ್ಷ ರೂ.ಗಳ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ನೀಡಲಾಗಿದೆ. ರಸ್ತೆ ಅಭಿವೃದ್ಧಿಗೆ ಗ್ರಾಮದ ಮಹಿಳೆಯರು ಮನವಿ ಪತ್ರ ನೀಡಿದ್ದಾರೆ. ಆ ರಸ್ತೆ ಅಂದಾಜು ಪಟ್ಟಿ ತಯಾರಿಸಲು ಇಂಜಿನಿಯರ್ ಅವರಿಗೆ ಸೂಚಿಸಿದ್ದೇನೆ. ಡಾ.ಮಂತರ್‌ಗೌಡ ಶಾಸಕರು, ಮಡಿಕೇರಿ ಕ್ಷೇತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net