

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿದ ಯದುವೀರ್ ಅವರನ್ನು ಮಠದಿಂದ ಮಂಗಳವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಶ್ರೀಗಳ ಆಶೀರ್ವಾದ ಪಡೆದ ಬಳಿಕ ಫಲತಾಂಬೂಲ ನೀಡಿ ಗೌರವಿಸಲಾಯಿತು. ಕೆಲಕಾಲ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಯದುವೀರ್ ಅವರು, ಚುನಾವಣೆಗೆ ಸ್ಪರ್ಧೆ ಹಿನ್ನೆಲೆಯಲ್ಲಿ ಎಲ್ಲೆಡೆ ಹೋಗಿ ಆಶೀರ್ವಾದ ಕೇಳುತ್ತಿದ್ದೇನೆ. ಹಾಗೆಯೇ ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಬೇರೆ ಯಾವ ವಿಚಾರಗಳ ಬಗ್ಗೆಯೂ ಚರ್ಚಿಸಿಲ್ಲ ಎಂದರು.
ನಮ್ಮ ಚುನಾವಣಾ ಪ್ರಚಾರ ಎಂದಿನಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬರುವ ಕುರಿತು ನನಗೆ ಇನ್ನೂ ಮಾಹಿತಿ ಇಲ್ಲ ಎಂದು ಹೇಳಿದರು.
‘ಯಾರು ರಾಜ’ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಸಂವಿಧಾನದಲ್ಲಿ ರಾಜ, ರಾಣಿ ಎಂಬ ಯಾವ ಪಟ್ಟಕ್ಕೂ ವಿಶೇಷ ಮಹತ್ವ ಇಲ್ಲ. ಎಲ್ಲರೂ ಪ್ರಜೆಗಳೇ. ಇಷ್ಟನ್ನು ಮಾತ್ರ ನಾನು ಹೇಳಬಲ್ಲೆ. ಅಲ್ಲದೇ ಮುಖ್ಯಮಂತ್ರಿಗಳ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಆ ವಿಚಾರದ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ, ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್, ಮಾಜಿ ಸಚಿವ ಎನ್. ಮಹೇಶ್, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಬಿಜೆಪಿ ಮೈಸೂರು ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಉಪ ಮೇಯರ್ ಶೈಲೇಂದ್ರ, ಮುಖಂಡರಾದ ಶಿವಕುಮಾರ್, ಫಣೀಶ್, ಕೃಷ್ಣಪ್ಪಗೌಡ, ಕೇಬಲ್ ಮಹೇಶ್ ಇತರರು ಇದ್ದರು.