ಶಾಸಕ ಕಂದಕೂರ ಹೇಳಿಕೆಗೆ ಸಹಮತ

ಮುದ್ನಾಳ-ರಾಠೋಡ್ ಹೇಳಿಕೆ | ಟಿಪ್ಪರ್ ಮಾಲೀಕರ ಸಂಘದ ಪ್ರತಿಭಟನೆ ವಿರೋಧ
ರವಿ ಮುದ್ನಾಳ
ರವಿ ಮುದ್ನಾಳ
Published on: 
ಕುಮಾರ ರಾಠೋಡ
ಕುಮಾರ ರಾಠೋಡ

ಯಾದಗಿರಿ: ಟಿಪ್ಪರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಹೇಳಿರುವ ಶಾಸಕ ಶರಣಗೌಡ ಕಂದಕೂರ ಅವರ ವಿರುದ್ಧ ಟಿಪ್ಪರ್ ಮಾಲೀಕರ ಸಂಘ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಗೆ ನಮ್ಮ ಕರುನಾಡುನಾಡು ರಕ್ಷಣೆ ಸಂಘಟನೆ ಜಿಲ್ಲಾಧ್ಯಕ್ಷ ಹಾಗೂ ಟಿಪ್ಪರ್ ಮಾಲೀಕರಾದ ರವಿ ಮುದ್ನಾಳ, ಕುಮಾರ ರಾಠೋಡ್ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರ ಸಮಕ್ಷಮದಲ್ಲಿ ಸಾಕ್ಷ್ಯಾಧಾರಗಳ ಸಮೇತ ಸಭೆ ನಡೆಸಿದ ಶಾಸಕರು, ಅಕ್ರಮ ತಡೆಗೆ ಆಡಳಿತ ಯಂತ್ರ ಸಂಪೂರ್ಣವಿಫಲವಾಗಿದೆ. ಒಂದು ವೇಳೆ ಅಧಿಕಾರಿಗಳು ಇದನ್ನು ನಿಯಂತ್ರಿಸದಿದ್ದರೆ ನಾನೇ ಸ್ವತಃ ಟಿಪ್ಪರ್‌ಗಳಿಗೆ ಬೆಂಕಿ ಹಚ್ಚಿ, ನಂತರ ಎದುರಾಗುವ ಕಾನೂನು ಕ್ರಮ ಎದುರಿಸುತ್ತೇನೆ ಎಂದಿದ್ದಾರೆ. ಅಂದರೆ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದರಿಂದಲ್ಲೇ ಓರ್ವ ಪರಿಪೂರ್ಣ ಪ್ರಜ್ಞಾವಂತ ನಾಗರಿಕನಾಗಿ ಶಾಸಕರು ಹೀಗೆ ಮಾತನಾಡಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ತೆಲಂಗಾಣದ ಓವರ್‌ಲೋಡ್ ಲಾರಿಗಳ ಸಂಚಾರದಿಂದ ರಸ್ತೆಗಳು ಸಂಪೂರ್ಣ ಹಾನಿಗೀಡಾಗಿ ಸಾರ್ವಜನಿಕರು ಓಡಾಡಲು ಪರದಾಡುವಂತಾಗಿದೆ. ಶಾಸಕರು ನೂರಾರು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ರಸ್ತೆ ಅಭಿವೃದ್ಧಿಗೆ ಶ್ರಮಿಸುತ್ತಿರುವಾಗ ಭಾರಿ ಲೋಡ್ ಲಾರಿಗಳಿಂದ ರಸ್ತೆಗಳು ಹಾಳಾಗುತ್ತಿರುವುದನ್ನು ಕಂಡು ಅವರು ಆಕ್ರೋಶ ವ್ಯಕ್ತಪಡಿಸುವುದು ಸಹಜ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ, ಇದಕ್ಕೆ ರಾಜಕೀಯ ಬಣ್ಣ ಬಳಿಯಲಾಗುತ್ತಿದ್ದು, ಕಾಣದ ಕೈಗಳು ಟಿಪ್ಪರ್ ಮಾಲೀಕರ ಸಂಘದ ಹಿಂದೆ ನಿಂತು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿವೆ ಎಂದು ಟಿಪ್ಪರ್ ಮಾಲೀಕರಾದ ಮುದ್ನಾಳ ಹಾಗೂ ರಾಥೋಡ್ ಗಂಭೀರ ಆರೋಪ ಮಾಡಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ರಸ್ತೆ ಹಾನಿ ಹಾಗೂ ಟಿಪ್ಪರ್ ಮಾಲೀಕರ ಸಂಘದೊಳಗಿನ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net