

ಯಾದಗಿರಿ: ಕರ್ನಾಟಕ ಪರೀಕ್ಷಾ ಪ್ರಾಽಕಾರ ಕರೆದಿರುವ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆಯ ಗ್ರೂಪ್-ಎ ಪ್ರಾಚಾರ್ಯರ ಹುದ್ದೆಗಳ ನೇರ ನೇಮಕಾತಿಗೆ ಸಂಬಂದಿಸಿದಂತೆ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಕೂಡಲೇ ಸರಿಪಡಿಸಬೇಕು ಎಂದು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ರವಿಂದ್ರನಾಥ ಹೊಸಮನಿ ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸೆ.೭ರಂದು ಕೆಇಎ ಹೊರಡಿಸಿರುವ ಅಽಸೂಚನೆ ಅನ್ವಯ ಅರ್ಜಿ ಸಲ್ಲಿಸುವಾಗ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಕೇವಲ ಕಲ್ಯಾಣ ಕರ್ನಾಟಕ (ಕೆಕೆ) ಹುದ್ದೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆರ್‌ಪಿಸಿ ಉಳಿಕೆ ಮೂಲ ವೃಂದ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತಾಂತ್ರಿಕವಾಗಿ ನಿರ್ಬಂಧಿಸಲಾಗಿದೆ ಎಂದಿರುವ ಅವರು, ಇದರಿಂದಾಗಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ವ್ಯಾಪ್ತಿ ಸೀಮಿತಗೊಂಡು ಅನ್ಯಾಯವಾಗುತ್ತಿದೆ ಎಂದು ದೂರಿದರು.
ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಸಂವಿಧಾನದ ೩೭೧(ಜೆ) ಅಡಿಯಲ್ಲಿ ವಿಶೇಷ ಮೀಸಲಾತಿ ಹಕ್ಕಿರುವುದರ ಜತೆಗೆ, ಅರ್ಹತೆ ಮತ್ತು ಸೇವಾ ಹಿರಿತನದ ಆಧಾರದ ಮೇಲೆ ಸಾಮಾನ್ಯ, ರಾಜ್ಯ ಮಟ್ಟದ ಆರ್‌ಪಿಸಿ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ತಕ್ಷಣ ತಂತ್ರಾಂಶದಲ್ಲಿ ಬದಲಾಯಿಸಬೇಕು. ಕಂದಾಯ ಇಲಾಖೆಯಿಂದ ಕಲ್ಯಾಣ ಕರ್ನಾಟಕ ನಿವಾಸಿ ಮತ್ತು ಆದಾಯ ಪ್ರಮಾಣ ಪತ್ರ (ನಮೂನೆ-ಎಚ್) ಪಡೆಯಲು ೨೦ ದಿನಗಳ ಸಮಯ ಬೇಕಾಗುತ್ತದೆ. ಪ್ರಸ್ತುತ ಅರ್ಜಿ ಸಲ್ಲಿಸಲು ಅ.೪ ಕೊನೇ ದಿನವಾಗಿದ್ದು, ಕೂಡಲೇ ಗಡುವು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಸಾವಿರಾರು ಸೇವಾ ನಿರತ ಉಪನ್ಯಾಸಕರ ಭವಿಷ್ಯ ಅಡಗಿದ್ದು, ಕೆಇಎ ಮತ್ತು ಶಾಲಾ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳಿಗೆ ಸಂಬಂಧಪಟ್ಟ ಸಚಿವರು ತಕ್ಷಣ ಸೂಕ್ತ ನಿರ್ದೇಶನ ನೀಡಿ ನ್ಯಾಯ ಒದಗಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಸಂಘದ ಪದಾಽಕಾರಿಗಳಾದ ರವೀಂದ್ರ ಗುತ್ತೇದಾರ್, ಭೀಮಾಶಂಕರ ದೊಡ್ಡಮನಿ, ಶ್ಯಾಮವೆಲ್, ಸಾಬಯ್ಯ ಇತರರಿದ್ದರು.