ಮೇಲೇಳದ ಕಲಬುರಗಿ ಜವಳಿ ಪಾರ್ಕ್​

ಪಿಎಂ ಮಿತ್ರ ಯೋಜನೆಗೆ ನಿಗದಿಪಡಿಸಿರುವ ಸ್ಥಳ
ಪಿಎಂ ಮಿತ್ರ ಯೋಜನೆಗೆ ನಿಗದಿಪಡಿಸಿರುವ ಸ್ಥಳ
Published on

ಪ್ರಮುಖ ಮುಖ್ಯಾಂಶಗಳು

  • ಮೂಲಸೌಕರ್ಯಕ್ಕೆ ರಾಜ್ಯ ಸರ್ಕಾರ ನಿರ್ಲಕ್ಷ್ಯ
  • ಮೂರು ವರ್ಷವಾದ್ರೂ ಆಗಿಲ್ಲ 1.43 ಕಿಮೀ ರಸ್ತೆ
ರಮೇಶ ಮೇಳಕುಂದಾ ಕಲಬುರಗಿ
ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿ, ಕಲ್ಯಾಣ ಕರ್ನಾಟಕದ ಹತ್ತಿ ಬೆಳೆಗಾರರಿಗೆ ಮಾರುಕಟ್ಟೆ ಜತೆ ಒಳ್ಳೆಯ ದರ ಸಿಗಲಿ ಎಂಬ ಸದಶಯದೊಂದಿಗೆ ನಗರ ಹೊರವಲಯದಲ್ಲಿ ಪಿಎಂ ಮಿತ್ರ ಯೋಜನೆಯಡಿ 2023ರಲ್ಲಿ ಅಡಿಗಲ್ಲು ನೆರವೇರಿಸಿದ ಜವಳಿ ಪಾರ್ಕ್​ಗೆ ಇದುವರೆಗೆ ಕನಿಷ್ಠ ಮೂಲಸೌಲಭ್ಯ ಒದಗಿಸುವ ಕೆಲಸವಾಗದೆ ಕನಸಾಗಿಯೇ ಉಳಿದಿದೆ.
ನದಿಸಿನ್ನೂರ, ಹೊನ್ನಕಿರಣಗಿ, ಫಿರೋಜಾಬಾದ್​ ವ್ಯಾಪ್ತಿಯಲ್ಲಿ ಪಿಎಂ ಮಿತ್ರ ಯೋಜನೆಗೆ 1000 ಎಕರೆ ಜಮೀನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಪಾರ್ಕ್​ಗೆ ಮೀಸಲಿಡಲಾಗಿದೆ. ಆದರೆ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಮಹತ್ವದ ಯೋಜನೆ ಲೆಕ್ಕಕ್ಕಿಲ್ಲದಂತಾಗಿದೆ.
2023ರ ಮಾರ್ಚ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಲಬುರಗಿ ಸೇರಿ ದೇಶಾದ್ಯಂತ ಏಳು ಪಿಎಂ ಮಿತ್ರಾ ಮೆಗಾ ಜವಳಿ ಪಾರ್ಕ್​ಗಳಿಗೆ ಅಡಿಗಲ್ಲು ನೆರವೇರಿಸಿದ್ದರು. ಪಿಪಿಪಿ ಮಾದರಿ ಪಾರ್ಕ್​ ಸ್ಥಾಪಿಸುವ ಯೋಜನೆ ಇದಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಆದರೆ ಕಾರ್ಯಚಟುವಟಿಕೆ ನಡೆಸಬೇಕಿರುವ ರಾಜ್ಯ ಸರ್ಕಾರ ದಿನಕ್ಕೊಂದು ನೆಪ ಹೇಳುತ್ತ ದಿನದೂಡುತ್ತಿದ್ದರಿಂದ ಮಹತ್ವದ ಯೋಜನೆ ಜಿಲ್ಲೆಯಿಂದ ಕೈತಪ್ಪುವ ಭೀತಿ ಎದುರಾಗಿದೆ.
ಮೂರು ವರ್ಷದಿಂದ ಜಿಲ್ಲೆಯ ಜನಪ್ರತಿನಿಧಿಗಳು ಶ್ರೀ, ಆರು ತಿಂಗಳು ಇಲ್ಲವೆ ವರ್ಷದೊಳಗೆ ಜವಳಿ ಪಾರ್ಕ್​ ಕಾರ್ಯಾಚರಣೆ ನಡೆಸಲಿದೆ ಎಂಬ ಹೇಳಿಕೆ ನೀಡುತ್ತ ದಿನದೂಡುತ್ತಿದ್ದರೆ, ಇದುವರೆಗೆ 1000 ಎಕರೆ ಜಮೀನಿನಲ್ಲಿ ಒಂದೇ ಒಂದು ಹುಲ್ಲು ಕಡ್ಡಿಯೂ ರಾಜ್ಯ ಸರ್ಕಾರ ಬದಲಾಯಿಸಿಲ್ಲ. ಮೂಲಸೌಕರ್ಯ ಒದಗಿಸಿ ಕೆಲಸಕ್ಕೆ ವೇಗ ನೀಡಬೇಕು ಎಂಬುದು ಜವಳಿ ಉದ್ಯಮಿಗಳು, ಸಾರ್ವಜನಿಕರ ಆಗ್ರಹ.

ಸದ್ಯದ ಸ್ಥಿತಿಗತಿ

* 1000 ಎಕರೆ ಜಮೀನು
* 1.43 ಕಿಮೀ ಕೆಸರುಕೊಚ್ಚೆ ರಸ್ತೆ
* ಈ ಸ್ವತ್ತು ಪಿಎಂ ಮಿತ್ರ ಪಾರ್ಕ್​ಗೆ ಸೇರಿದ್ದು, ಅತಿಕ್ರಮ ಪ್ರವೇಶ ನಿಷೇಧ ಫಲಕ
* ಪಿಎಂ ಮಿತ್ರ ಪಾರ್ಕ್​ ನಿಗದಿತ ಸ್ಥಳದ ಬಹುತೇಕ ಜಮೀನುಗಳಲ್ಲಿ ಕೃಷಿ ಕಾಯಕ

ದಾಖಲೆಯಲ್ಲೇ ಉಳಿದ ಕೆಲಸಗಳು

  • ರಾಷ್ಟ್ರೀಯ ಹೆದ್ದಾರಿಯಿಂದ 1.43 ಕಿಮೀ ಸಂಪರ್ಕ ರಸ್ತೆ ನಿರ್ಮಾಣ
  • 3.63 ಎಂಎಲ್​ಡಿ ನೀರಿಗಾಗಿ ಮದ್ರಿ ಬಳಿ 35 ಕೋಟಿ ವೆಚ್ಚದಲ್ಲಿ ಅಣೆಕಟ್ಟು
  • ನಂದಿಕೂರ ಬಳಿ 12.09 ಎಂಎಲ್​ಡಿ ನೀರಿಗಾಗಿ ಪೈಪ್​ಲೈನ್​ ಅಳವಡಿಕೆ
  • 180 ಮೆಗಾ ವಾಟ್​ ವಿದ್ಯುತ್​ ಪೂರೈಕೆಗೆ ಪವರ್​ ಸ್ಟೇಷನ್​ ನಿರ್ಮಾಣ
ಅಗತ್ಯ ಸೌಲಭ್ಯ ಒದಗಿಸಿದರೆ ಕೆಲಸ ಶುರು
ಪಿಎಂ ಮಿತ್ರ ಪಾರ್ಕ್​ಗೆ ಮೂಲಸೌಕರ್ಯ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಸೌಕರ್ಯ ಕಲ್ಪಿಸಲು ಅಗತ್ಯವಿರುವ ಅನುಮತಿ ಅನುಮತಿ ಪಡೆದು ಕಾಮಗಾರಿ ಆರಂಭಿಸಲು ಮೂರು ವರ್ಷ ಬೇಕಾಗಿದೆ. ಪ್ರಸ್ತುತ ಮಾಲಿನ್ಯ ನಿಯಂತ್ರಣ ಮಂಡಳಿ ನಿರಾಪೇಕ್ಷಣಾ ಪತ್ರ, ಅರಣ್ಯ ಇಲಾಖೆಯಿಂದ ಮರಗಿಡಗಳ ಕಟಾವಿಗೆ ಅನುಮತಿ ದೊರಕಿದೆ. ಪ್ರಸ್ತುತ ರಸ್ತೆ ನಿರ್ಮಾಣ, ನೀರು ಮತ್ತು ಕೆಪಿಟಿಸಿಎಲ್​ನಿಂದ ವಿದ್ಯುತ್​ ಪೂರೈಕೆ ಮಾಡಿದರೆ ಎಲ್ಲ ಕೆಲಸ&ಕಾರ್ಯ ಸುರಳಿತವಾಗಿ ಸಾಗಲಿದೆ. ಮೂಲಸೌಕರ್ಯಕ್ಕಾಗಿ ಕೆಕೆಆರ್​ಡಿಬಿ ಕಳೆದ ವರ್ಷ 50 ಕೋಟಿ ನೀಡಲು ನಿರ್ಧರಿಸಿದ್ದರೂ ಕೆಲಸ ಆರಂಭವಾಗದ್ದರಿಂದ ಅನುದಾನ ಬಳಯಾಗಿಲ್ಲ. ಪ್ರಸಕ್ತ ವರ್ಷ ಸಾಮಾನ್ಯ ಅನುದಾನದಡಿ 30.90 ಕೋಟಿ ರೂ., ಮ್ಯಾಕ್ರೋದಲ್ಲಿ 20 ಕೋಟಿ ರೂ. ಸೇರಿ 50 ಕೋಟಿ ರೂ. ಮೀಸಲಿಟ್ಟಿದ್ದು, ಮೂಲಸೌಕರ್ಯ ಕಾಮಗಾರಿ ಆರಂಭಿಸಿ ಅನುದಾನದ ಸದುಪಯೋಗ ಮಾಡಿಕೊಳ್ಳುವ ಅಗತ್ಯವಿದೆ.
ನೀರು ಎಷ್ಟು ಬೇಕು?
  • ಕೈಗಾರಿಕಾ ಚಟುವಟಿಕೆಗೆ 12.09 ಎಂಎಲ್​ಡಿ
  • ಗೃಹಬಳಕೆ, ಕುಡಿಯಲು 3.63 ಎಂಎಲ್​ಡಿ
ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ ಇಲಾಖೆಗಳು ಸಕ್ರಿಯವಾಗಲಿ
ಕೈಮಗ್ಗ ಮತ್ತು ಜವಳಿ ಇಲಾಖೆ, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ, ವಿದ್ಯುತ್​, ಅರಣ್ಯ ಮತ್ತು ಪರಿಸರ ಅಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇಲಾಖೆ, ಕಾರ್ಯದರ್ಶಿಗಳ ಹಂತದಲ್ಲೂ ಜವಳಿ ಪಾರ್ಕ್​ ಬಗ್ಗೆ ಆಸಕ್ತಿ ವಹಿಸಬೇಕಿದೆ. ವಿಶೇಷವಾಗಿ ಜಿಲ್ಲೆಯ ಜನಪ್ರತಿನಿಧಿಗಳು ಗಮನಹರಿಸಿ ಬೆನ್ನು ಬಿದ್ದು ಕೆಲಸ ಮಾಡಿಸಬೇಕಿದೆ ಎಂಬುದು ಉದ್ಯಮಿಗಳು, ಉದ್ಯೋಗ ನಿರೀೆಯಲ್ಲಿರುವವರ ಅಂಬೋಣ.

ಉದ್ಯೋಗವಿಲ್ಲದೇ ಗುಳೆ ಹೋಗುವುದು ತಡೆಯಬೇಕು, ಉದ್ಯೋಗ ದೊರಕಿಸಬೇಕು ಎಂಬ ಉದ್ದೇಶದಿಂದ ಸವಾಲಾಗಿ ಸ್ವೀಕರಿಸಿ ನಿರಂತರ ಪರಿಶ್ರಮ ಪಟ್ಟು ಕೇಂದ್ರ ಸರ್ಕಾರದಿಂದ ಪಿಎಂ ಮಿತ್ರ ಜವಳಿ ಪಾರ್ಕ್​ ಅನುಮೋದಿಸಿ, ಅಡಿಗಲ್ಲು ನೆರವೇರಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಅನುಮತಿ ನೀಡುವುದು, ಹೆಸರು ಬದಲಾವಣೆ ಸೇರಿ ಅನಗತ್ಯ ವಿಳಂಬ ಮಾಡಿ, ಜನರಿಗೆ ಅನ್ಯಾಯ ಮಾಡುತ್ತಿದೆ. ತಕ್ಷಣ ನಿರಂತರವಾಗಿ ಬೆನ್ನು ಬಿದ್ದು, ಕೆಲಸ ಮಾಡಿ, ಜವಳಿ ಪಾರ್ಕ್​ ಕೆಲಸ ಮಾಡಬೇಕು. ಚಿಂಚೋಳಿಯಲ್ಲಿ ಸಿದ್ಧಸಿರಿ ಕಾರ್ಖಾನೆಯಿಂದ ಉತ್ತಮ ಕೆಲಸವಾಗುತ್ತಿದೆ. ಅದೇ ಮಾದರಿ ಪಾರ್ಕ್​ನಿಂದ ಅನುಕೂಲವಾಗಲಿದೆ.

ಕಲಬುರಗಿಯಲ್ಲಿ ಪಿಎಂ ಮಿತ್ರ ಪಾರ್ಕ್​ಗೆ 2023ರಲ್ಲಿ ಅಡಿಗಲ್ಲು ನೆರವೇರಿದೆ. ರಾಜ್ಯ ಸರ್ಕಾರ ಕೆಲಸಕ್ಕೆ ವೇಗ ನೀಡಿ ಮೂಲಸೌಲಭ್ಯ ಒದಗಿಸಿದರೆ ಈ ಭಾಗದ ಉದ್ಯಮಿ, ನಿರುದ್ಯೋಗಿಗಳಿಗೆ ಅನುಕೂಲ, ಹತ್ತಿ ಬೆಳೆಗಾರರಿಗೆ ಪೂರಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net