

ಶಹಾಪುರ: ಹಿಂದೂಗಳು ಜಾತಿ, ಮತ ಮತ್ತು ಪಂಥಗಳೆಂದು ಬೇಧ ಭಾವ ಮಾಡದೆ ಒಟ್ಟಾಗಿ ಸನಾತನ ಧರ್ಮ ರಕ್ಷಣೆಗೆ ಮುಂದಾಗಬೇಕಿದೆ ಎಂದು ಯುವ ವಾಗ್ಮೀ ಹಾರಿಕಾ ಮಂಜುನಾಥ ಹೇಳಿದರು.
ನಗರದ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಭಾನುವಾರ ರಾತ್ರಿ ಆಯೋಜಿಸಿದ್ದ ಸನಾತನ ಹಿಂದೂ ಧರ್ಮ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿ, ಸಾವಿರಾರು ವರ್ಷಗಳಿಂದ ನಿರಂತರವಾಗಿ ದೇಶದ ಮತ್ತು ಸನಾತನ ಧರ್ಮದ ಮೇಲೆ ದಾಳಿ ನಡೆದರೂ ನಮ್ಮ ಪೂರ್ವಿಕರ ಶ್ರಮ ಮತ್ತು ಬಲಿದಾನದಿಂದ ಸನಾತನ ಹಿಂದೂ ಧರ್ಮ ಇಂದಿಗೂ ಜೀವಂತವಾಗಿದೆ ಎಂದರು.
ಸನಾತನ ಧರ್ಮದ ಮೇಲೆ ಸಾವಿರಾರು ವರ್ಷಗಳ ಕಾಲ ನಿರಂತರ ದಾಳಿ ನಡೆದರೂ ಇಂದಿಗೂ ಜೀವಂತವಾಗಿರಲು ಸಾಧ್ಯವಾಗಿದೆ ಎಂದರೆ ಅದು ನಮ್ಮ ಪರಂಪರೆ, ಆಧ್ಯಾತ್ಮೀಕತೆ ಋಷಿಮುನಿಗಳು ಬರೆದಿಟ್ಟ ವೇದ, ಉಪನಿಷತ್ತು, ಧರ್ಮ ಗ್ರಂಥಗಳನ್ನು ಬರೆದಿಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರಿಂದಲ್ಲೇ ಇದು ಸಾಧ್ಯ ಎಂದರು.
ರಾಮಾಯಣ, ಮಹಾಭಾರತ, ಭಗವದ್ಗೀತೆ, ಶರಣ ವಚನ ಗ್ರಂಥಗಳನ್ನು ಮಕ್ಕಳಿಗೆ ಓದಲು ಕೊಡಬೇಕು. 108 ಉಪನಿಷತ್ ಓದಲಾಗದಿದ್ದರೂ ಅವುಗಳನ್ನು ನಮ್ಮ ಮನೆಯಲ್ಲಿ ಇಟ್ಟಿರಬೇಕೆಂದ ಅವರು, ಕಾಶ್ಮೀರಿ ಪಂಡಿತರ, ಬಾಂಗ್ಲಾದೇಶದ ಹಿಂದೂಗಳ ಸ್ಥಿತಿ-ಗತಿ ಬಗ್ಗೆ ವಿವರಿಸಿದರು. ಹಿಂದೂಗಳು ಈಗಲೂ ಒಟ್ಟಾಗಿ ಹೋರಾಡದಿದ್ದರೆ ಮತ್ತು ಸನಾತನ ಧರ್ಮ ಅಸ್ತಿತ್ವ ಕಾಪಾಡಿಕೊಳ್ಳದೆ ಹೋದರೆ ಮುಂದೊಂದು ದಿನ ನಮಗೂ ಕೆಟ್ಟ ಪರಿಸ್ಥಿತಿ ಬರಬಹುದು ಎಂಬ ಎಚ್ಚರಿಕೆ ನೀಡಿದರು.
ಹಲವಾರು ನಿದರ್ಶನಗಳ ಮೂಲಕ ನೆರೆದ ಹಿಂದೂಗಳನ್ನು ತಮ್ಮ ಮಾತಿನ ಛಾಟಿ ಮೂಲಕ ಮಂತ್ರಮುಗ್ಧರನ್ನಾಗಿ ಮಾಡಿದರು. ಯುವ ಸಮೂಹ ಬೋಲೋ ಭಾರತ ಮಾತಾಕೀ ಜೈ ಎಂಬ ಜೋಘೋಷಗಳು ಮೊಳಗಿದವು.
ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಯುವ ಮುಖಂಡ ಕರಣ ಸುಬೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗಣ್ಣ ಯಡ್ರಾಮಿ ನಿರೂಪಿಸಿ, ವಂದಿಸಿದರು.