

ಯಾದಗಿರಿ: ಕ್ರೀಡೆಗಳು ಮಾನಸಿಕ ಮತ್ತು ದೈಹಿಕವಾಗಿ ಗಟ್ಟಿಗೊಳಿಸುವ ಮೂಲಕ ಉತ್ತಮ ಆರೋಗ್ಯ ಹೊಂದಲು ಬಹಳ ಸಹಕಾರಿಯಾಗುತ್ತದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಇಲ್ಲಿನ ಟೆನಿಸ್ ಕ್ಲಬ್ನಿಂದ ಆಫಿಸರ್ ಕ್ಲಬ್ನಲ್ಲಿ ರಾಜ್ಯದ ವಿವಿಧ ಕ್ರೀಡಾಪಟುಗಳಿಂದ ಮೂರು ದಿನಗಳ ಕಾಲ ನಡೆದ 30,40,50,60 ಮತ್ತು 70 ಕೆಟಗೆರಿ ಟೆನಿಸ್ ಕ್ರೀಡೆಗಳಲ್ಲಿ ವಿಜೇತ ಆಟಗಾರರಿಗೆ ಭಾನುವಾರ ಸಂಜೆ ಮಾಜಿ ಶಾಸಕ ದಿ.ನಾಗಣ್ಣಗೌಡ ಕಂದಕೂರ ಫೌಂಡೇಷನಿಂದ ಕಪ್ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ದೇಸಿ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದ ಕಂದಕೂರ, ಸೋಲು&ಗೆಲುವು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೋಲೆ ಗೆಲಿವಿನ ಮೆಟ್ಟಿಲು ಎಂಬ ಭಾವನೆಯಲ್ಲಿ ಮತ್ತು ಸ್ಪರ್ಧಾತ್ಮಕ ಮನಸ್ಸಿನಿಂದ ಆಟಗಾರರು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಇಂದು ಕ್ರೀಡೆಗಳಿಗೆ ಬಹಳ ಮಹತ್ವವಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಾನ್ಯತೆ ಸಿಗುತ್ತಿದೆ. ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರಗಳು ಆರ್ಥಿಕ ಸೇರಿ ಇತರೇ ಸೌಲಭ್ಯಗಳು ನೀಡುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದರು. ಈ ವೇಳೆ ಉದ್ಯಮಿ ಮಲ್ಲಿಕಾರ್ಜುನರೆಡ್ಡಿ ಕಂದಕೂರ, ಹೆಚ್ಚುವರಿ ಎಸ್ಪಿ ಧರಣೇಶ, ಆಯೋಜಕರಾದ ಅಜಯರೆಡ್ಡಿ ಏಲ್ಹೆರಿ, ನೀಲಕೃಷ್ಣ, ಪ್ರಸಾದ, ಡಾ.ಶರಣಗೌಡ ಕೊಡ್ಲಾ, ಮಹೇಶರೆಡ್ಡಿ ಹತ್ತಿಕುಣಿ ಇತರರಿದ್ದರು.
ಈ ವೇಳೆ ಕ್ರೀಡೆಗಳಲ್ಲಿ ಪ್ರಥಮ, ದ್ವೀತಿಯ ಸ್ಥಾನಗಳಲ್ಲಿ ವಿಜೇತ ಆಟಗಾರರಾದ ಜಗದೀಶ ಹೆಂದೆ, ಮಹೇಶರೆಡ್ಡಿ ಹತ್ತಿಕುಣಿ, ಪೂರ್ಣಬಾಬು, ಜೀತೆಂದ್ರ ಅವರಿಗೆ ಶಾಸಕರಾದ ಕಂದಕೂರ ಮತ್ತು ತುನ್ನೂರ ಅವರುಗಳು ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ ಮೂರು ದಿನಗಳ ಹಿಂದೆ ಆರಂಭವಾದ ಈ ಕ್ರೀಡಾಕೂಟವನ್ನು ಎಸ್ಪಿ ಪೃಥ್ವಿಕ್ ಶಂಕರ್, ನಿವೃತ್ತ ಎಡಿಜಿಪಿ ಗಗನ್ ದೀಪ್ ಚಾಲನೆ ನೀಡಿದ್ದರು. ಬೆಂಗಳೂರು, ಬಾಗಲಕೋಟ, ರಾಯಚೂರು, ಸಿಂದನೂರ, ಜಮಖಂಡಿ, ವಿಜಯಪುರ ಮತ್ತು ಬೀದರ್ ಸೇರಿ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.