

ಯಾದಗಿರಿ: ಕೇಂದ್ರ ಸಚಿವ ವಿ.ಸೋಮಣ್ಣ ಮನಸ್ಸು ಮಾಡಿದ್ದರಿಂದಲೇ ವಂದೇ ಭಾರತ ಸ್ಲೀಪರ್ ರೈಲು ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆ ಅವಕಾಶ ಸಿಕ್ಕಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ನಗರದ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ವಂದೇ ಭಾರತ ಸ್ಲೀಪರ್ ರೈಲು ನಿಲುಗಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಈ ರೈಲು ಆರಂಭದ ವಿಷಯ ತಿಳಿಯುತ್ತಲೇ ನಾನು ಅವರನ್ನು ಭೇಟಿ ಮಾಡಿ ಯಾದಗಿರಿಯಲ್ಲಿ ನಿಲುಗಡೆ ಮಾಡಬೇಕು. ಕಾರಣ ಇದು ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆ. ಇಲ್ಲಿನ ಜನರ ಅನುಕೂಲಕ್ಕಾಗಿ ಈ ಕೆಲಸ ಮಾಡಬೇಕೆಂದು ದೂರವಾಣಿಯಲ್ಲಿ ಮನವಿ ಮಾಡಿದೆ. ಎರಡೇ ನಿಮಿಷದಲ್ಲಿ ಗುಂತಕಲ್ ವಿಭಾಗದ ಅಧಿಕಾರಿ ಗೋಪಾಲಕೃಷ್ಣನ್ ತಮ್ಮನ್ನು ಸಂರ್ಪಕಿಸಿ ಬೇಡಿಕೆ ಬಗ್ಗೆ ತಿಳಿದುಕೊಂಡು ಸಚಿವರ ಸೂಚನೆ ಮೇರೆಗೆ ರೈಲು ಇಲ್ಲಿ ನಿಲುಗಡೆಗೆ ಅವಕಾಶ ನೀಡಿದರು ಎಂದು ತಿಳಿಸಿದರು.
ನರೇಂದ್ರ ಮೋದಿ ಪ್ರಧಾನಿ, ಸೋಮಣ್ಣ ಸಚಿವ ಮತ್ತು ನಾನು ಶಾಸಕನಾಗಿ ಇರುವವರೆಗೂ ಜಿಲ್ಲೆಯ ರೈಲ್ವೆ ಮತ್ತು ಜಲಶಕ್ತಿ ಇಲಾಖೆ ಸೇರಿ ವಿವಿಧ ಕೆಲಸ ಮಾಡಿಕೊಡಲು ಶತಪ್ರಯತ್ನ ಮಾಡುವೆ ಎಂದ ಕಂದಕೂರ, ಗುರುಮಠಕಲ್ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಕೇಂದ್ರ ಜಲಶಕ್ತಿ ಇಲಾಖೆಯಿಂದ ಅನುದಾನ ನೀಡುವಂತೆ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿರುವೆ ಎಂದರು.
ಯಾವ ಜನ್ಮದ ಋಣವೋ ಗೊತ್ತಿಲ್ಲ, ತುಮಕೂರು ಸಂಸದರಾಗಿದ್ದಾಗಲೂ ಸೋಮಣ್ಣ ಅವರು ಯಾದಗಿರಿ ಜಿಲ್ಲೆಯ ಯಾವುದೇ ಬೇಡಿಕೆಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತ ಬಂದಿದ್ದಾರೆ. ಅದಕ್ಕಾಗಿ ಅವರಿಗೂ ಮತ್ತು ಪ್ರಧಾನಿ ಮೋದಿ ಅವರಿಗೂ ಜಿಲ್ಲೆಯ ಜನರ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ವಂದೇ ಭಾರತ ಸ್ಲೀಪರ್ ರೈಲು ನಿಲುಗಡೆ ಮಾಡಿದ ಕೇಂದ್ರ ಸರ್ಕಾರ ಮತ್ತು ಸಚಿವ ವಿ.ಸೋಮಣ್ಣ ಕ್ರಮವನ್ನು ಸ್ವಾಗತಿಸಿದರು. ಸರ್ಕಾರಗಳು ಯಾವುದೇ ಇರಲಿ, ಯಾದಗಿರಿಯಲ್ಲಿ ಎಲ್ಲ ರೈಲು ನಿಲ್ಲಬೇಕು. ಆದರೆ ಪ್ರತಿ ರೈಲು ನಿಲುಗಡೆಗೆ ದುಂಬಾಲು ಬೀಳುವಂತಾಗಬಾರದು ಎಂದರು.
ಈ ರೈಲು ನಿಲುಗಡೆ ಹಿಂದೆ ಶಾಸಕ ಶರಣಗೌಡ ಕಂದಕೂರ ಪ್ರಯತ್ನ ಮೆಚ್ಚುವಂತಹದ್ದು. ಸಚಿವ ಸೋಮಣ್ಣ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಈ ಕೆಲಸ ಮಾಡಿದ್ದರಿಂದ ಅವರಿಗೂ, ಸಚಿವರಿಗೂ, ಪ್ರಧಾನಿಗೂ ಕೃತಜ್ಞತೆ ಸಲ್ಲಿಸಿದರು.
ಎಡಿಆರ್ಎಂ ಸಂಜೀವರಾವ್ ಪ್ರಾಸ್ತಾವಿಕ ಮಾತನಾಡಿದರು. ಡಿಸಿಎಂ ಸೌರವ್ ಪ್ರಕಾಶ, ಯಾದಗಿರಿ ನಿಲ್ದಾಣ ವ್ಯವಸ್ಥಾಪಕ ಭಾಗಿರಥ ಮೀನಾ, ಮಾಜಿ ಸಂಸದ ಡಾ.ಉಮೇಶ ಜಾದವ್, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ಬಿಜೆಪಿ ಮುಖಂಡರಾದ ರಾಚಣ್ಣಗೌಡ ಮುದ್ನಾಳ್, ದೇವಿಂದ್ರನಾಥ ನಾದ, ಸುಭಾಷಚಂದ್ರ ಕಟಕಟಿ, ನಾಗರತ್ನ ಅನಪುರ, ಶ್ರೀಧರ ಸಾಹುಕಾರ, ಮಲ್ಲಣ್ಣಗೌಡ ಕೌಳೂರ, ಟಿ.ಎನ್. ಭೀಮುನಾಯಕ ಇತರರಿದ್ದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ, ರೈಲ್ವೆ ಟಿಸಿ ನಿರ್ಮಲಾ ನಿರೂಪಣೆ ಮಾಡಿದರು.