ತಾಕತ್ತಿದ್ದರೆ ಟಿಪ್ಪರ್​ಗಳಿಗೆ ಬೆಂಕಿ ಹಚ್ಚಿ

ಯಾದಗಿರಿಯಲ್ಲಿ ಸೋಮವಾರ ಟಿಪ್ಪರ್​ ಮಾಲೀಕರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್​ ಮುಖಂಡ ಶರಣಪ್ಪ ಮಾನೇಗಾರ ಮಾತನಾಡಿದರು. ಹನುಮೇಗೌಡ ಬೀರನಕಲ್​, ಉಮೇಶ ಮುದ್ನಾಳ್​, ತೇಜರಾಜ ರಾಠೋಡ್​, ರುಪತಿ, ಶಶಾಂಕ ಇತರರಿದ್ದರು.
ಯಾದಗಿರಿಯಲ್ಲಿ ಸೋಮವಾರ ಟಿಪ್ಪರ್​ ಮಾಲೀಕರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್​ ಮುಖಂಡ ಶರಣಪ್ಪ ಮಾನೇಗಾರ ಮಾತನಾಡಿದರು. ಹನುಮೇಗೌಡ ಬೀರನಕಲ್​, ಉಮೇಶ ಮುದ್ನಾಳ್​, ತೇಜರಾಜ ರಾಠೋಡ್​, ರುಪತಿ, ಶಶಾಂಕ ಇತರರಿದ್ದರು.
Published on: 

ಯಾದಗಿರಿ: ಟಿಪ್ಪರ್​ಗಳಿಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ್ದ ಶಾಸಕ ಶರಣಗೌಡ ಕಂದಕೂರ ವಿರುದ್ಧ ತಿರುಗಿಬಿದ್ದು ಸೋಮವಾರ ಟಿಪ್ಪರ್​ಗಳೊಂದಿಗೆ ಬೀದಿಗಿಳಿದ ಮಾಲೀಕರ ಹೋರಾಟ ರಾಜಕೀಯ ತಿರುವು ಪಡೆಯುವ ಮೂಲಕ ಹೊಸ ವರಸೆಗೆ ನಾಂದಿ ಹಾಡಿತು.

ಪ್ರತಿಭಟನೆಗೆ ಎಂಟ್ರಿ ಕೊಟ್ಟ ಕಾಂಗ್ರೆಸ್​ ನಾಯಕ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಅವರ ಬಹಿರಂಗ ಭಾಷಣದಲ್ಲಿನ ಎಚ್ಚರಿಕೆ ಮಾತುಗಳು ಹೋರಾಟದ ಕಿಚ್ಚು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೊಸ ಬಸ್​ ನಿಲ್ದಾಣ ಬಳಿ ಪ್ರತಿಭಟನಾಕಾರರು ಆಗಮಿಸುತ್ತಿದ್ದಂತೆ ಮಾತನಾಡಿದ ಮಾನೇಗಾರ, ಟಿಪ್ಪರ್​ ಮಾಲೀಕರು ಶೋಕಿಗಾಗಿ ವಾಹನಗಳನ್ನು ಖರೀದಿಸಿಲ್ಲ. ಕುಟುಂಬ ನಿರ್ವಹಣೆಗಾಗಿ ಸಾಲ ಮಾಡಿ ಖರೀದಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಟಿಪ್ಪರ್​ ಮಾಲೀಕರು ತಮ್ಮ ಕುಟುಂಬ ನಿರ್ವಹಿಸಲು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಹಾಗೂ ಗೌರವಯುತ ಜೀವನ ನಡೆಸಲು ವಾಹನಗಳನ್ನು ಖರೀದಿಸಿದ್ದಾರೆ. ನಿಮ್ಮಂತೆ ಐಷಾರಾಮಿ ಜೀವನಕ್ಕಾಗಿ ಯಾರೂ ಟಿಪ್ಪರ್​ಗಳನ್ನು ಇಟ್ಟಿಲ್ಲ ಎಂದು ಮಾನೇಗಾರ ತಿರುಗೇಟು ನೀಡಿದರು.

ಒಂದು ಹಂತದಲ್ಲಿ ಏರು ಧ್ವನಿಯಲ್ಲಿ ಹರಿಹಾಯ್ದ ಶರಣಪ್ಪ, ಶಾಸಕರೇ ಟಿಪ್ಪರ್​ಗಳ ಸಮೇತ ನಿಮ್ಮ ಮನೆ ಮುಂದಿನ ರಸ್ತೆಗೆ ಬಂದಿದ್ದೇವೆ. ಪೆಟ್ರೋಲ್​, ಬೆಂಕಿ ಪೊಟ್ಟಣ ನಮ್ಮಲ್ಲಿದೆ. ತಾಕತ್ತಿದ್ದರೆ ನೀವು ಬಂದು ಬೆಂಕಿ ಹಚ್ಚಿ ನೋಡೋಣ. ನೀವು ಇಲ್ಲದಿದ್ದರೆ ನಿಮ್ಮವರನ್ನಾದರೂ ಕಳುಹಿಸಿ ಎಂದು ಸವಾಲು ಹಾಕಿದರು. ಚುನಾವಣೆಯಲ್ಲಿ ಎಲ್ಲರ ಕೈಕಾಲು ಬಿದ್ದು ಗೆದ್ದಿದ್ದೀರಿ. ಈಗ ಮತ ಹಾಕಿದವರ ವಿರುದ್ಧವೇ ಮಾತಾಡುತ್ತಿದ್ದೀರಿ. ಇಂದಿನಿಂದ ನಿಮ್ಮ ಎಲ್ಲ ಚಟುವಟಿಕೆ ಮೇಲೆ ನಾವು ನಿಗಾ ಇಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net