

ಯಾದಗಿರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರೆದಿರುವ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಗ್ರೂಪ್ -ಎ ಪ್ರಾಚಾರ್ಯರ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಪಟ್ಟಂತೇ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಕೂಡಲೇ ಸರಿಪಡಿಸಬೇಕು ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ರವಿಂದ್ರನಾಥ ಹೊಸಮನಿ ಒತ್ತಾಯಿಸಿದ್ದಾರೆ.ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸೆ.7ರಂದು ಕೆಇಎ ಹೊರಡಿಸಿರುವ ಅಧಿಸೂಚನೆಯನ್ವಯ ಅರ್ಜಿ ಸಲ್ಲಿಸುವಾಗ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಕೇವಲ ಕಲ್ಯಾಣ ಕರ್ನಾಟಕ (ಕೆಕೆ) ಹುದ್ದೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆರ್ಪಿಸಿ ಉಳಿಕೆ ಮೂಲ ವೃಂದ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತಾಂತ್ರಿಕವಾಗಿ ರ್ನಿಬಂಧಿಸಲಾಗಿದೆ ಎಂದಿರುವ ಅವರು, ಇದರಿಂದಾಗಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ವ್ಯಾಪ್ತಿ ಸೀಮಿತಗೊಂಡು ಅನ್ಯಾಯವಾಗುತ್ತಿದೆ ಎಂದು ದೂರಿದರು.ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಸಂವಿಧಾನದ 371(ಜೆ) ಅಡಿಯಲ್ಲಿ ವಿಶೇಷ ಮೀಸಲಾತಿ ಹಕ್ಕಿರುವುದರ ಜತೆಗೆ, ಅರ್ಹತೆ ಮತ್ತು ಸೇವಾ ಹಿರಿತನದ ಆಧಾರದ ಮೇಲೆ ಸಾಮಾನ್ಯ, ರಾಜ್ಯ ಮಟ್ಟದ ಆರ್ಪಿಸಿ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ತಕ್ಷಣವೇ ತಂತ್ರಾಂಶದಲ್ಲಿ ಬದಲಾಯಿಸಬೇಕು. ಕಂದಾಯ ಇಲಾಖೆಯಿಂದ ಕಲ್ಯಾಣ ಕರ್ನಾಟಕ ನಿವಾಸಿ ಮತ್ತು ಆದಾಯ ಪ್ರಮಾಣ ಪತ್ರ (ನಮೂನೆ-ಎಚ್) ಪಡೆಯಲು 20 ದಿನಗಳ ಸಮಯ ಬೇಕಾಗುತ್ತದೆ. ಪ್ರಸ್ತುತ ಅರ್ಜಿ ಸಲ್ಲಿಸಲು ಅ.4 ಕೊನೆಯ ದಿನವಾಗಿದ್ದು, ಕೂಡಲೇ ಗಡುವು ವಿಸ್ತರಿಸಬೇಕು ಎಂದು ಆಗ್ರಹಿಸಿದರು.ನೇಮಕಾತಿ ಪ್ರಕ್ರಿಯೆಯಲ್ಲಿ ಸಾವಿರಾರು ಸೇವಾ ನಿರತ ಉಪನ್ಯಾಸಕರ ಭವಿಷ್ಯ ಅಡಗಿದ್ದು, ಕೆಇಎ ಮತ್ತು ಶಾಲಾ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳಿಗೆ ಸಂಬಂಧಪಟ್ಟ ಸಚಿವರು ತಣವೇ ಸೂಕ್ತ ನಿರ್ದೇಶನ ನೀಡಿ ನ್ಯಾಯ ಒದಗಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಸಂದ ಪದಾಧಿಕಾರಿಗಳಾದ ರವೀಂದ್ರ ಗುತ್ತೇದಾರ, ಭೀಮಾಶಂಕರ ದೊಡ್ಡಮನಿ, ಶ್ಯಾಮವೆಲ್, ಸಾಬಯ್ಯ ಸೇರಿದಂತೆಯೇ ಇತರರಿದ್ದರು.