ಜೀವ ತೆಗೆಯುವ ಹತ್ತಿಕುಣಿ ಕ್ರಾಸ್​ ರಸ್ತೆ

ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್​ದಿಂದ ಮೈಲಾಪುರ ಅಗಸಿವರೆಗಿನ ಹಾಳಾದ ರಸ್ತೆ.
ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್​ದಿಂದ ಮೈಲಾಪುರ ಅಗಸಿವರೆಗಿನ ಹಾಳಾದ ರಸ್ತೆ.
Published on: 

ಯಾದಗಿರಿ: ರಸ್ತೆ ತುಂಬೆಲ್ಲ ತಗ್ಗು-ಗುಂಡಿ, ಕಿತ್ತಿ ಹೋದ ಡಾಂಬರ್​, ರಸ್ತೆ ಮೇಲೆದ್ದಿರುವ ಸಿಸಿ ಕಬ್ಬಿಣದ ರಾಡ್​, ಎಲ್ಲೆಂದರಲ್ಲಿ ಸಣ್ಣ ಸಣ್ಣ ಜಲ್ಲಿ ಕಲ್ಲುಗಳು. ವಾಹನವಷ್ಟೇ ಅಲ್ಲ ಮನುಷ್ಯರು ಕೂಡ ನಡೆದುಕೊಂಡು ಹೋಗಲಾರದಷ್ಟು ಹಾಳಾದ ಹತ್ತಿಕುಣಿ ಕ್ರಾಸ್​ನಿಂದ ಗಾಂಧಿ ಚೌಕ್​ ಮಾರ್ಗದ ಮೈಲಾಪುರ ಅಗಸಿವರೆಗಿನ ರಸ್ತೆಯ ದುಸ್ಥಿತಿ.

ಒಮ್ಮೆ ಈ ರಸ್ತೆಯಲ್ಲಿ ಯಾರಾದರೂ ಹೊಸ ವ್ಯಕ್ತಿ ಹೋಗಿ ಬಂದರೆ ಮತ್ತೊಮ್ಮೆ ಈ ರಸ್ತೆ ಕಡೆ ಮುಖ ಕೂಡ ಮಾಡದಷ್ಟು ಹದಗೆಟ್ಟಿದೆ. ಅಲ್ಲದೆ ಇಲ್ಲಿನ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕದೆ ಹೋಗಲಾರರು. ಈ ಮಟ್ಟಕ್ಕೆ ಹಾಳಾದರೂ ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ದಿವ್ಯ ರ್ನಿಲಕ್ಷಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಜನರು ಹಿಡಿ ಶಾಪ ಹಾಕುವಂತಾಗಿದೆ. ಈ ರಸ್ತೆ ಸಂಪೂರ್ಣ ಹಾಳಾಗಿ ದಶಕಗಳೇ ಗತಿಸಿದರೂ ಕ್ಯಾರೆ ಎನ್ನುವವರು ಇಲ್ಲದ ಕಾರಣ ನಿತ್ಯ ಈ ರಸ್ತೆ ಮೇಲೆ ಸಂಚರಿಸುವ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದಲ್ಲದೆ ವಾಹನಗಳು ಬೇಗನೆ ದುರಸ್ತಿ ಬರುತ್ತಿವೆ.

ನಗರದಲ್ಲಿಯೇ ಅತ್ಯಂತ ಜನಸಂದಣಿ ಇರುವ ಪ್ರಸಿದ್ಧ ಮಾರುಕಟ್ಟೆ, ಇತರೆ ವಿವಿಧ ವ್ಯಾಪಾರದ ಸ್ಥಳವಾಗಿರುವ ಈ ಮಾರ್ಗದಲ್ಲಿ ಆಳುದ್ದ ತಗ್ಗು ಜನರ ಜೀವ ಪಡೆಯಲು ಬಕಾಸೂರನಂತೆ ಕಾದಿವೆ. ಸುಮಾರು ಎರಡು ಕಿಮೀ ಈ ರಸ್ತೆ ಮಾರ್ಗದಲ್ಲಿ ಅನೇಕ ಕಡೆ ಡಾಂಬರ್​ ಕಿತ್ತಿಹೋದ ಪರಿಣಾಮ ಕಂಕರ್​ ಮೇಲೆದ್ದು, ವಾಹನಗಳ ಟೈಯರ್​ನಿಂದ ಸ್ಲಿಫ್​ಆಗಿ ಜನರ ಮೈಗೆ ತಾಕಿ ಗಾಯಗಳಾದ ಉದಾರಣೆಗಳಿವೆ.

ಅಪ್ಪಿ, ತಪ್ಪಿ ಕಂಕರ್​ ತಲೆ, ಕಣ್ಣಿಗೆ ಬಡಿದರೆ ಜೀವ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಗರದ ಐತಿಹಾಸಿಕ ಚೌಕ್​ ಎಂದೇ ಕರೆಯಲ್ಪಡುವ ಮಹಾತ್ಮ ಗಾಂಧಿಜೀ ಚೌಕ್​ ಎಂದರೆ ಪ್ರಮುಖ ವ್ಯಾಪಾರದ ಕೇಂದ್ರವಾಗಿದೆ. ಬಟ್ಟೆ ಅಂಗಡಿ, ಹೋಟೆಲ್​, ಖಾನಾವಳಿ, ಬಂಗಾರದ ಅಂಗಡಿ, ಹೂವು, ಪಾನ್​ಶಾಪ್​, ಕೈಬಂಡಿಗಳ ವ್ಯಾಪಾರ, ರಸ್ತೆ ಮೇಲೆ ಕುಳಿತು ತರಕಾರಿ ಮಾರುವವರು, ಕಿರಾಣಿ ಅಂಗಡಿ, ಟೆಂಗು ಮಾರಾಟಗಾರರು ಹೀಗೆ ಎಲ್ಲವೂ ಮಾರಾಟದ ಪ್ರಮುಖ ಸ್ಥಳವಾಗಿದೆ.

ಮೊದಲೇ ಇಕ್ಕಟ್ಟಾದ ರಸ್ತೆಯಿದ್ದು, ಎರಡು ಬದಿಗಳಲ್ಲಿ ಅರ್ಧದಷ್ಟು ಜಾಗ ವಿವಿಧ ಕೈ ಬಂಡಿ ವ್ಯಾಪಾರಿಗಳೇ ಆಕ್ರಮಿಸಿದ್ದಾರೆ. ಇಂತಹದರಲ್ಲಿ ದ್ವಿಚಕ್ರ ವಾಹನ, ಕಾರ್​, ಜೀಪ್​ ಆಟೋರಿಾ ಮತ್ತು ಸಿಟಿಬಸ್​ಗಳು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ಸುಲಭ ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ. ಗಾಂಧಿ ಚೌಕ್​ ಎಂದರೇ ದಿನದ 24 ತಾಸು ಜನರಿಂದ ಕೂಡಿರುವ ಸ್ಥಳ. ಇದರ ಮುಂದಿನ ಒಂದು ಕಿಮೀ ಮತ್ತು ಹಿಂದಿನ್​ ಅರ್ಧ ಕಿಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಗಾಂಧಿ ಚೌಕ್​ನಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗುವುದೇ ಒಂದು ಸವಾಲಿನ ಕೆಲಸವಾಗಿದೆ.

ಕ್ಯಾರೆ ಎನ್ನದ ಜಿಲ್ಲಾಡಳಲಿತ

ಆಟೋ ಸ್ಂಡ್​ಗೆ ನಿಗದಿತ ಸ್ಥಳವಿಲ್ಲ. ನಡುರಸ್ತೆಯಲ್ಲಿಯೇ ಸಾಲುಗಟ್ಟಿ ನಿಲ್ಲಿಸಲಾಗುತ್ತದೆ. ಈ ನಡುವೆ ದ್ವಿಚಕ್ರ ವಾಹನಗಳ ಭರಾಟೆ ನಡುವೆ ಸಿಟಿಬಸ್​ಗಳ ಆಗಮನ, ಪಾದಚಾರಿ ನಡೆದಾಟವಿದೆ. ಇದೇ ಜಾಗದಲ್ಲಿ ನಗರ ಪೊಲೀಸ್​ ಠಾಣೆ ಇದ್ದು, ಮದುವೆ, ಹಬ್ಬ, ಜಾತ್ರೆಗಳ ವೇಳೆ ಹತ್ತಾರು ಹಳ್ಳಿಗಳ ಸಾವಿರಾರು ಜನರು ನಿತ್ಯ ವಿವಿಧ ಸಾಮಾನುಗಳ ಖರೀದಿಗೆ ಬಂದಾಗಲಂತೂ ಕಾಲಿಡಲು ಜಾಗ ಸಿಗುವುದಿಲ್ಲ. ಇಷ್ಟೋಂದು ಜನೋಪಯೋಗಿ ಸ್ಥಳದ ಮುಖ್ಯ ರಸ್ತೆ ಕೆಟ್ಟಿದ್ದರೂ ನಗರಸಭೆ, ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ದಿವ್ಯ ರ್ನಿಲ್ಯ ತಾಳಿದ್ದು ಹಾಗೂ ಜನ ಸಹಿಸಿಕೊಂಡಿದ್ದು ಸೋಜಿಗವೇ ಸರಿ. ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಲು, ವಾಹನ ಸಂಚಾರಿಗಳ ಕೈ, ಕಾಲು ಮುರಿಯದಿರಲು ಕೂಡಲೇ ಗುಣಮಟ್ಟದ ರಸ್ತೆ ಬೇಕಿದೆ.

ನಗರಸಭೆಯಿಂದ ಈ ರಸ್ತೆ ಕಾಮಗಾರಿ ಕೈಗೊಳ್ಳಲು ಕೆಕೆಆರ್​ಡಿಬಿಯಿಂದ ಅನುದಾನ ಮಂಜೂರು ಮಾಡಿಸಲಾಗಿತ್ತು. ಟೆಂಡರ್​ ಕೂಡ ಆಗಿತ್ತು. ಡಾಂಬರ್​ ದರ ಹೆಚ್ಚಾಗಿದೆ ಎಂಬುದು ಸೇರಿ ಬೇರೆ ಬೇರೆ ಕಾರಣದಿಂದ ಕೆಲಸ ಶುರು ಮಾಡಲಿಲ್ಲ. ನಗರಸಭೆಯಿಂದ ಗುತ್ತಿಗೆದಾರರಿಗೆ ನೋಟಿಸ್​ ನೀಡಲಾಗಿತ್ತು. ಆದರೆ ಅವರು ಕೋರ್ಟ್​ ಮೆಟ್ಟಿಲು ಏರಿದ್ದರಿಂದ ಕೆಲಸ ವಿಳಂಬವಾಗುತ್ತಿದೆ. ಅದರ ಬಗ್ಗೆ ಡಿಸಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
> ಚನ್ನಾರಡ್ಡಿ ಪಾಟೀಲ್​ ತುನ್ನೂರ ಶಾಸಕ, ಯಾದಗಿರಿ