

ಯಾದಗಿರಿ: ಯಾವುದೇ ವಸ್ತುಗಳನ್ನು ಖರೀದಿಸಿದ ಮೇಲೆ ಅದರಿಂದ ಗ್ರಾಹಕರಿಗೆ ತೊಂದರೆಯಾಗಿದ್ದರೇ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ಕಾನೂನಾತ್ಮಕ ಪರಿಹಾರ ಪಡೆಯಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರಿ ಅಧ್ಯಕ್ಷೆ ಮಾಲತಿ ಗುರಣ್ಣ ಹೇಳಿದರು.
ಇಲ್ಲಿನ ಜವಾಹರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಹಕರ ಹಕ್ಕುಗಳ ಕುರಿತು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುಣಮಟ್ಟದ ವಸ್ತುಗಳನ್ನು ಪಡೆಯುವುದು ಗ್ರಾಹಕರ ಹಕ್ಕಾಗಿದೆ. ಇಲ್ಲಿ ಮೊಸವಾದರೆ ಹಾಗೂ ತೊಂದರೆಯಾಗಿದ್ದರೇ ಅಂತಹವರು ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದರು.
ಗುಣಮಟ್ಟದ ವಸ್ತುಗಳ ಸಂಬಂಧಪಟ್ಟಂತೆ ಆಯೋಗದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳ ಉದಾಹರಣೆಗಳೊಂದಿಗೆ ಅವರು ವಿವರಣೆ ನೀಡಿದರು. ಮಹಿಳಾ ಸದಸ್ಯೆ ಫರ್ಹಿನ್ ಬೇಗಂ ಮಾತನಾಡಿ, ಕಾನೂನಿನಲ್ಲಿ ಗ್ರಾಹಕ ಎಂದರೆ ಯಾರು ಹಾಗೂ ಗ್ರಾಹಕರ ಹಕ್ಕುಗಳ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಪ್ರತಿಯೊಬ್ಬರೂ ವಸ್ತು ಖರೀದಿಸಿದ ನಂತರ ತಪ್ಪದೆ ಬಿಲ್ ಪಡೆಯಬೇಕು. ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಪ್ರಾಚಾಯೆರ್ ಡಾ.ಶೇಖಾ ಇಕ್ಬಾಲ್ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕಿನ ಕುರಿತು ಅರಿವು ಮೂಡಿಸುವ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ಸೇವೆಯಲ್ಲಿ ಅಥವಾ ವಸ್ತು ಖರೀದಿಸಿದ ನಂತರ ಕಳಪೆ ಗುಣಮಟ್ಟ ಕಂಡುಬಂದರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. ಕಾಜಲ್ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಸಲೇಹಾ ನಿಖಾತ್ ಸ್ವಾಗತಿಸಿದರು. ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಬಿ.ಒಡೆಯರ ವಂದಿಸಿದರು. ಧನರಾಜ ಪಾತ್ರೆ ನಿರೂಪಿಸಿದರು.
ಜಿಲ್ಲಾ ಆಯೋಗದ ಸಿಬ್ಬಂದಿ, ಜವಾಹರ್ ಕಾಲೇಜಿನ ಬಿ.ಎಡ್ ಮತ್ತು ಐಟಿಐ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.