ಕೃಷ್ಣಾ-ಭೀಮೆಯತ್ತ ಭಕ್ತರ ದೌಡು

ಯಾದಗಿರಿ ನಗರದ ಭೀಮಾ ನದಿಯಲ್ಲಿ ಸೇರುತ್ತಿರುವ ಸಾವಿರಾರು ಭಕ್ತರು ಹಳೇ ಪಾದಬಿಟ್ಟು ಹೊಸ ಪಾದ ಧರಿಸುತ್ತಿರುವುದು.
ಯಾದಗಿರಿ ನಗರದ ಭೀಮಾ ನದಿಯಲ್ಲಿ ಸೇರುತ್ತಿರುವ ಸಾವಿರಾರು ಭಕ್ತರು ಹಳೇ ಪಾದಬಿಟ್ಟು ಹೊಸ ಪಾದ ಧರಿಸುತ್ತಿರುವುದು.
Published on: 

ಯಾದಗಿರಿ: ಸವದತ್ತಿ ಯಲ್ಲಮ್ಮ ದೇವಿಗೆ ಹಾವು ಸುತ್ತಿಕೊಂಡು ಪಾದ ನುಂಗಿದೆ ಎಂಬ ವದಂತಿ ವ್ಯಾಪಕವಾಗಿ ಹರಡಿದ ಬೆನ್ನಲ್ಲೆ ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿಯ ವಿವಿಧೆಡೆ ಒಂದೆರಡು ದಿನಗಳಿಂದ ಸಾವಿರಾರು ಭಕ್ತರು ಜಮಾಯಿಸಿ ಸ್ನಾನ, ಪೂಜೆ, ಹೊಸ ಬಟ್ಟೆ ಧರಿಸುತ್ತಿದ್ದಾರೆ.

ಯಲ್ಲಮ್ಮ ದೇವಿ ಹೆಸರಿನಲ್ಲಿ ಪಾದ ಕಟ್ಟಿಕೊಂಡಿರುವ ಭಕ್ತರಿಗೆ ಕೆಡುಕಾಗಲಿದೆ, ದೇವಿಯ ಮೈಮೇಲೆ ಹಾವು ಸುತ್ತಿಕೊಂಡಿದೆ. ಹೀಗಾಗಿ ಪಾದ ಕಟ್ಟಿಕೊಂಡವರು ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಹಳೆಯ ಪಾದ ಬಿಚ್ಚಿ ಹೊಸ ಪಾದ ಕಟ್ಟಿಕೊಳ್ಳಬೇಕು. ಹಳೆಯ ಬಟ್ಟೆಗಳನ್ನು ತ್ಯಜಿಸಿ ಹೊಸ ಬಟ್ಟೆ ಧರಿಸಬೇಕು ಎಂಬ ಸುದ್ದಿ ಹರಡಿದೆ. ಇದನ್ನು ನಂಬಿದ ಭಕ್ತರು ನದಿಗಳತ್ತ ಧಾವಿಸುತ್ತಿದ್ದು, ಭೀಮಾ ಮತ್ತು ಕೃಷ್ಣಾ ನದಿ ದಡದಲ್ಲಿ ಸಾವಿರಾರು ಜನರು ಹಳೆಯ ಪಾದ ಬಿಚ್ಚಿ ಹೊಸ ಪಾದ ಕಟ್ಟಿಕೊಂಡು ಸ್ನಾನ ಮಾಡುವುದು ಜೋರಾಗಿಯೇ ನಡೆದಿದೆ.

ನದಿ ತೀರದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಸವದತ್ತಿ ಯಲ್ಲಮ್ಮಗೆ ಹಾವು ಸುತ್ತಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ವದಂತಿಯ ಸತ್ಯಾಸತ್ಯತೆ ಪರಿಶೀಲಿಸದೆ ಸಾವಿರಾರು ಜನರು ನದಿಗಳತ್ತ ಧಾವಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಗತ್ತು ಸಾಕಷ್ಟು ಮುಂದುವರಿದಿರುವ ಕಾಲದಲ್ಲಿಯೂ ಇಲ್ಲದ ವದಂತಿಗಳಿಗೆ ಮರುಳಾಗಿ ಸಾವಿರಾರು ಜನರು ಆಚರಣೆಗಳಿಗಾಗಿ ಮುಗಿಬೀಳುತ್ತಿರುವುದು ಆತಂಕಕಾರಿ ಬೆಳವಣಿಗೆ.