ಗಿರಿಜಿಲ್ಲೆಯಲ್ಲಿ ಶೇ.90.79 ಮತದಾನ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ ಶುಕ್ರವಾರ ಯಾದಗಿರಿ ತಹಸಿಲ್​ ಕಚೇರಿ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ಶಿಕ್ಷಕರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ ಶುಕ್ರವಾರ ಯಾದಗಿರಿ ತಹಸಿಲ್​ ಕಚೇರಿ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ಶಿಕ್ಷಕರು.
Published on: 

ಯಾದಗಿರಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿದ್ದು, ಜಿಲ್ಲೆಯಾದ್ಯಂತ ಶೇ. 90.79 ದಾಖಲೆ ಮತದಾನವಾಗಿದೆ.

ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆದಿದ್ದು, ಸುರಪುರದಲ್ಲಿ 93.12 ಮತ್ತು ಹುಣಸಗಿಯಲ್ಲಿ 93.88 ಅತಿ ಹೆಚ್ಚು ಮತದಾನವಾಗಿದೆ. ಅದರಂತೆ ಶಹಾಪುರದಲ್ಲಿ ಶೇ.88.91, ಕೆಂಭಾವಿಯಲ್ಲಿ ಶೇ.92.79, ವಡಗೇರಾದಲ್ಲಿ ಶೇ.86, ಕೊಡೆಕಲ್​ನಲ್ಲಿ ಶೇ.91.67, ಯಾದಗಿರಿಯಲ್ಲಿ ಶೇ.90.40 ಮತ್ತು ಗುರುಮಠಕಲ್​ನಲ್ಲಿ ಶೇ.92.02 ಮತದಾನವಾಗುವ ಮೂಲಕ ಒಟ್ಟಾರೆ ಜಿಲ್ಲೆಯಲ್ಲಿ ಶೇ.90.79ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ ಒಟ್ಟು 2,259 ಮತದಾರರಿದ್ದು, ಇವರಲ್ಲಿ 1,548 ಪುರುಷ ಮತ್ತು 711ಮಹಿಳೆಯರು ಇದ್ದಾರೆ.ಬೆಳಗ್ಗೆಯಿಂದಲ್ಲೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಹಾಕುವ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು. ಮಧ್ಯಾಹ್ನ 2ಗಂಟೆವರೆಗೆ 1,771 ಮತದಾರರು (1,235 ಪುರುಷರು ಮತ್ತು 536 ಮಹಿಳೆಯರು) ತಮ್ಮ ಹಕ್ಕು ಚಲಾಯಿಸಿದ್ದರು. ಪುರುಷರ ಮತದಾನ ಶೇ.79.78 ಹಾಗೂ ಮಹಿಳೆಯರ ಮತದಾನ ಶೇ.75.39 ಆಗಿತ್ತು. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಸೂಕ್ತ ಬಿಗಿ ಪೊಲೀಸ್​ ಭದ್ರತೆಯೊಂದಿಗೆ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ಮುಂದುವರಿದಿದೆ ಎಂದು ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ ತಿಳಿಸಿದ್ದಾರೆ.

ಮತದಾನಕ್ಕಾಗಿ ಶಿಕ್ಷಕ ಮತದಾರಿಗೆ ರಜೆ ಘೋಷಣೆ ಮಾಡಿದ್ದರಿಂದ ಬಹುತೇಕ ಮತದಾರರು ಬೆಳಗ್ಗೆಯಿಂದಲೇ ಸಾಲು, ಸಾಲಾಗಿ ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಜಿಲ್ಲೆಯಲ್ಲಿ ಒಟ್ಟು 8 ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು, ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವೈದ್ಯಕಿಯ ತಪಾಸಣೆ ಕೇಂದ್ರ ತೆರೆಯಲಾಗಿತ್ತು. ಮತದಾನ ಕೇಂದ್ರದಲ್ಲಿ ಮತದಾರರ ಹೊರತುಪಡಿಸಿ ಬೇರೆಯವರನ್ನು ಒಳಗೆ ಬಿಡದಂತೆ ವ್ಯವಸ್ಥೆ ಮಾಡಲಾಗಿತ್ತು. ಆಯಾ ಮತಗಟ್ಟೆಯಲ್ಲಿ ತಹಸೀಲ್ದಾರ್​ರು, ತಾಪಂ ಇಒ ಅವರು ಉಸ್ತುವಾರಿ ವಹಿಸಿ ಶಾಂತಿಯುತ ಮತದಾನಕ್ಕೆ ವ್ಯವಸ್ಥೆ ಮಾಡಿದ್ದರು. ಪ್ರತಿ ಮತದಾನ ಕೇಂದ್ರ ಹೊರಗೆ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷದ ಮುಖಂಡರು, ಚುನಾವಣೆ ಉಸ್ತುವಾರಿಗಳು ವೇದಿಕೆ ಹಾಕಿಕೊಂಡು ಕುಳಿತು ಮತದಾನಕ್ಕೆ ಬರುತ್ತಿದ್ದ ಮತದಾರರನ್ನು ಕೈಮುಗಿಯುತ್ತಿರುವುದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net