

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಯಾದವಾಡ ಗ್ರಾಮದಲ್ಲಿ ಗ್ರಾಮದೇವಿ ಜಾತ್ರೆಯ ಅಂಗವಾಗಿ ಶನಿವಾರ ನಡೆದ ಹೊನ್ನಾಟ ಇಡೀ ಗ್ರಾಮವನ್ನು ಭಂಡಾರಮಯವಾಗಿಸಿತ್ತು. ಮಹಿಳೆಯರು, ಪುರುಷರು, ವೃದ್ಧರು, ಯುವಕರು ಮಕ್ಕಳು ಹೊನ್ನಾಟದಲ್ಲಿ ಪಾಲ್ಗೊಂಡರು.
21 ವರ್ಷಗಳ ನಂತರ ಜಾತ್ರೆ ನಡೆಯುತ್ತಿರುವುದರಿಂದ ಗ್ರಾಮದಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. 3 ದಿನಗಳ ಹೊನ್ನಾಟಕ್ಕೆ ಶನಿವಾರ ಚಾಲನೆ ದೊರೆಯಿತು. ಗ್ರಾಮದೇವಿಯರ ಮೂರ್ತಿಗಳೊಂದಿಗೆ ಮೆರವಣಿಗೆ ಹೊರಟ ಅಪಾರ ಭಕ್ತರು ಭಂಡಾರ, ಹೂವುಗಳನ್ನು ತೂರಿ ಸ್ವಾಗತಿಸಿದರು. ಮೆರವಣಿಗೆಯಲ್ಲಿ ಡೊಳ್ಳು, ವಾದ್ಯಮೇಳದೊಂದಿಗೆ ದೇವಿಯರು ಗ್ರಾಮವನ್ನು ಪ್ರದಕ್ಷಿಣೆ ಹಾಕಿದರು.
ಓಣಿಗಳ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದು ಜಮಾಯಿಸಿದ್ದರು. ಹಿಂದು- ಮುಸ್ಲಿಂ ಸೇರಿ ಎಲ್ಲ ಸಮುದಾಯದವರು ಹಳದಿ, ಬಿಳಿ ಜುಬ್ಬಾ ಧರಿಸಿದ್ದರೆ ಮಹಿಳೆಯರು ಹಳದಿ ಸೀರೆಯಲ್ಲಿ ಹೊನ್ನಾಟಕ್ಕೆ ರಂಗು ನೀಡಿದರು. ತಮ್ಮ ಮನೆಗಳ ಎದುರು ಮೆರವಣಿಗೆ ಬರುತ್ತಿದ್ದಂತೆ ಜನ ಮಹಡಿಯ ಮೇಲೆ ನಿಂತು ಭಂಡಾರ ಎರಚಿದರು. ಭಾನುವಾರ ಹಾಗೂ ಸೋಮವಾರ ಹೊನ್ನಾಟ ನಡೆಯಲಿದ್ದು, ನಂತರ ದೇವಿಯರನ್ನು ಊರ ಅಗಸಿಯಲ್ಲಿ ಪ್ರತಿಷ್ಠಾಪನೆಗೊಳಿಸಲಾಗುತ್ತದೆ.
ಸಂಜೆ ವೇದಮೂರ್ತಿ ಕಲ್ಲಿನಾಥ ಶಾಸ್ತಿçಗಳು ಪುರಾಣ ಹೇಳಿದರು. ನಂತರ ಅಮ್ಮಿನಭಾವಿಯ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾಂತೇಶ ಹಡಪದ ಹಾಗೂ ಈಶ್ವರ ಹಿರೇಮಠ ಅವರಿಂದ ಭಜನಾ ಸ್ಪರ್ಧೆಗಳು ನಡೆದವು.