

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಯಾದವಾಡ ಗ್ರಾಮದಲ್ಲಿ 21 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಗುರುವಾರ ಆರಂಭಗೊ0ಡಿತು. ದುರ್ಗಮ್ಮ ಹಾಗೂ ದ್ಯಾಮವ್ವ ದೇವಿಯರು ವಿಜೃಭಣೆಯಿಂದ ಗ್ರಾಮವನ್ನು ಪ್ರವೇಶಿಸಿದರು.
ನಯಾಗರದ ಸಿದ್ಧಲಿಂಗ ಸ್ವಾಮೀಜಿ, ಸಿಂಗನಹಳ್ಳಿ ಸ್ವಾಮೀಜಿ ಸಾನಿಧ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದೇವಿಯರ ಮೂರ್ತಿಗಳನ್ನು ಟ್ರ‍್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.
ನೂರಾರು ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಪೂರ್ಣ ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಡೊಳ್ಳು, ಜಗ್ಗಲಗಿ, ಭಜನಾ ಮೇಳಗಳು ಮೆರವಣಿಗೆಗೆ ಮೆರುಗು ನೀಡಿದವು.
ಮೇ. 2ರಂದು ಬ್ರಾಹ್ಮಿ ಮುಹೂರ್ತದಲ್ಲಿ ರಾಚೂಟೇಶ್ವರ ಸ್ವಾಮೀಜಿ ಹಾಗೂ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇವಿಯರಿಗೆ ಅಭಿಷೇಕ, ಕುಂಕುಮಾರ್ಚನೆ, ಹೋಮ- ಹವನ, ದೃಷ್ಟಿ ಬರೆಯುವ ಕಾರ್ಯಕ್ರಮ, ಪ್ರಾಣ ಪ್ರತಿಷ್ಠಾಪನೆ, ಮಾಂಗಲ್ಯ ಧಾರಣೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.