ಜಗತ್ತಿಗೆ ಭಾರತ ಶಕ್ತಿಯ ಪರಿಚಯ

Hrr29Jatha 1 (1)
Published on

ಹರಿಹರ: ಆಪರೇಷನ್ ಸಿಂಧೂರ ಮೂಲಕ ಜಗತ್ತಿಗೆ ಭಾರತದ ತಾಕತ್ತನ್ನು ಪರಿಚಯಿಸಿದ ಕೀರ್ತಿ ಸೈನಿಕರು ಹಾಗೂ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದು ದಕ್ಷಿಣ ಪ್ರಾಂತ ಸಹ ಸಂಪರ್ಕ ಪ್ರಮುಖ ಯಾದವ ಕೃಷ್ಣ ಹೇಳಿದರು.

ತಾಲೂಕಿನ ಎಚ್.ಕೆ.ವೀರಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ನಾಗರಿಕ ಹಿತರಕ್ಷಣಾ ಸಮಿತಿಯಿಂದ ವಿಜಯ ತಿರಂಗಾ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಪಹಲ್ಗಾಮ್ಲ್ಲಿ ಅಮಾಯಕ ಪ್ರವಾಸಿಗರ ಧರ್ಮವನ್ನು ಕೇಳಿ ಹತ್ಯೆ ಮಾಡಿದ ಭಯೋತ್ಪಾದಕರ ಪೈಶಾಚಿಕ ಕೃತ್ಯ ಕೋಟ್ಯಂತರ ಭಾರತೀಯರ ಸಹನೆಯನ್ನು ಅಣಕಿಸುವಂತಿತ್ತು. ಇಡೀ ಜಗತ್ತು ಭಾರತದ ಪ್ರತೀಕಾರವನ್ನು ಕಾಯುತ್ತಿತ್ತು. ಪಾಕಿಸ್ತಾನದ ಹೃದಯ ಭಾಗಕ್ಕೆ ನಮ್ಮ ಕ್ಷಿಪಣಿಗಳು ನುಗ್ಗಿ 11 ಏರಬೇಸ್ ಹಾಗೂ 9 ಭಯೋತ್ಪಾದಕರ ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಿವೆ. ಈ ಮೂಲಕ ಇದು ಹಿಂದಿನ ಭಾರತವಲ್ಲ, ನಮ್ಮ ತಂಟೆಗೆ ಬಂದರೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡುತ್ತೇವೆ ಎಂದು ಜಗತ್ತಿಗೆ ಸಾರಿ ಹೇಳಿದೆ ಎಂದರು.

75 ವರ್ಷಗಳಲ್ಲಿ ಅನೇಕ ವಿಜಯೋತ್ಸವಗಳನ್ನು ಆಚರಿಸಿದ್ದೇವೆ. ಆದರೆ, ಆಪರೇಷನ್ ಸಿಂಧೂರದ ಮೂಲಕ ಇದು ಸೌಮ್ಯ ಸ್ವಭಾವದ ದೇಶವಲ್ಲ ಎಂದು ನಾಲ್ಕು ದಿಕ್ಕುಗಳಿಗೆ ತಿಳಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದು ನಮ್ಮ ಹೆಮ್ಮೆ ಎಂದರು.

ಇಸ್ರೇಲ್ ಮತ್ತು ಹಮಾಸ್, ರಷ್ಯಾ ಮತ್ತು ಉಕ್ರೇನ್, ಇರಾಕ್ ಮತ್ತು ಇರಾನ್, ಟರ್ಕಿ ಮತ್ತು ಸಿರಿಯಾನ್ ದೇಶಗಳು ಹಲವು ವರ್ಷಗಳಿಂದ ಯುದ್ಧ ಮಾಡುತ್ತಿದ್ದರೂ ಲಾಜಿಕಲ್ ಅಂತ್ಯ ಕಾಣಲು ಸಾಧ್ಯವಾಗುತ್ತಿಲ್ಲ. ಆದರೆ ಭಾರತ ಕೇವಲ ನಾಲ್ಕು ದಿನಗಳಲ್ಲಿ ಲಾಜಿಕಲ್ ಅಂತ್ಯಕ್ಕೆ ತಂದಿದೆ. ಇದಕ್ಕೆ ಕಾರಣವಾದ ಯೋಧರಿಗೆ ಹಾಗೂ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದರು.

ಬೆಳಗ್ಗೆ ನಗರದ ಹರಿಹರೇಶ್ವರ ದೇವಸ್ಥಾನದಿಂದ ಆರಂಭವಾದ ತಿರಂಗಾ ಯಾತ್ರೆಗೆ ನಿವೃತ್ತ ಯೋಧರಾದ ಅಣ್ಣಪ್ಪ, ಪ್ರಕಾಶ್, ಶಿವಕುಮಾರ್ ಯಲವಟ್ಟಿ, ವೀರೇಶ್ ಅವರು ಚಾಲನೆ ನೀಡಿದರು. ದೇವಸ್ಥಾನ ರಸ್ತೆ, ರಾಣಿ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಶೋಭಾ ಟಾಕೀಸ್ ರಸ್ತೆ, ಶಿವಮೊಗ್ಗ ರಸ್ತೆ ಮೂಲಕ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದವರೆಗೆ ಯಾತ್ರೆ ಜಯಘೊಷ ಮೊಳಗಿಸುತ್ತಾ ಸಾಗಿತು.

ಯಾತ್ರೆಯಲ್ಲಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ಅಜೀತ್ ಸಾವಂತ್, ಲಿಂಗರಾಜ್ ಹಿಂಡಸಘಟ್ಟ, ರಾಜು ರೋಖಡೆ, ಬಾತಿ ಚಂದ್ರಶೇಖರ್, ಸತೀಶ್ ಪೂಜಾರಿ, ನಾಗರಿಕ ಹಿತರಕ್ಷಣಾ ಸಮಿತಿಯ ಎಸ್. ಕೃಷ್ಣಮೂರ್ತಿ ಶ್ರೇಷ್ಟಿ, ನಾಗಮಣಿ ಶಾಸ್ತ್ರೀ, ನಗರಸಭಾ ಸದಸ್ಯರಾದ ಆಟೋ ಹನುಮಂತಪ್ಪ, ಅಶ್ವಿನಿ ಕೃಷ್ಣ, ಮುಖಂಡರಾದ ಎಚ್. ದಿನೇಶ್, ಧರಣೇಂದ್ರ, ಚಂದ್ರಕಾಂತ್, ಕಾಲೇಜು ವಿದ್ಯಾರ್ಥಿಗಳು ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net