

ಕಾರಟಗಿ : ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತನ್ನೂರು ಮತ್ತು ಆತನ ಮಗನ ಕಿರುಕುಳದಿದಂದ ಮಾನಸಿಕವಾಗಿ ನೊಂದ ಪಿಎಸ್‌ಐ ಪರಶುರಾಮ ಮೃತಪಟ್ಟಿದ್ದಾನೆ. ಶಾಸಕರನ್ನು ಪಕ್ಕದಲ್ಲಿ ಕುಳ್ಳರಿಸಿಕೊಂಡು ಗೃಹಸಚಿವ ಜಿ.ಪರಮೇಶ್ವರ ಪಿಎಸ್‌ಐ ಪತ್ನಿಗೆ ದೂರವಾಣಿ ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಈ ಪ್ರಕರಣಕ್ಕೆ ನ್ಯಾಯ ದೊರೆಯುದಿಲ್ಲವಾದ್ದರಿಂದ ಕೂಡಲೇ ಸಿಬಿಐಗೆ ವಹಿಸಬೇಕು ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ತಾಲೂಕಿನ ಸೋಮನಾಳ ಗ್ರಾಮದ ಮೃತ ಪಿಎಸ್‌ಐ ಪರಶುರಾಮ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದರು.
ವಾಲ್ಮೀಕಿ ನಿಗಮ ಹಗರಣದಲ್ಲಿ ಬಂಧಿತರಾಗಿರುವ ಬಿ.ನಾಗೇಂದ್ರ ಮತ್ತು ಬಸವರಾಜ ದದ್ದಲ್ ಹೆಸರು ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿಲ್ಲ. ಪಿಎಸ್‌ಐ ಸಾವಿಗೆ ಕಾರಣರಾದ ಶಾಸಕ ಚನ್ನಾರೆಡ್ಡಿ ಪಾಟೀಲ್ ತನ್ನೂರುಗೆ ಎಐಸಿಸಿ, ಸಿಎಂ ಮತ್ತು ಡಿಸಿಎಂ ಬೆಂಬಲವೂ ಇದೆ. ಆದ್ದರಿಂದ ಇದು ಎಸ್‌ಐಟಿ ಅಲ್ಲ. ಬದಲಾಗಿ ಎಸ್‌ಎಸ್‌ಎಸ್‌ಐಟಿ(ಸಿದ್ದರಾಮಯ್ಯ, ಶಿವಕುಮಾರ, ಸ್ಪೇಷಲ್ ಇನ್‌ವೆಸ್ಟಿಗೇಷನ್ ಟೀಂ). ಈ ಸಂಸ್ಥೆಯಿಂದ ಪಿಎಸ್‌ಐ ಪರಶುರಾಮ ಸಾವಿಗೆ ನ್ಯಾಯ ದೊರೆಯುವುದಿಲ್ಲ. ಕೂಡಲೇ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆ.7ರಂದು ಗೃಹ ಸಚಿವ ಜಿ.ಪರಮೇಶ್ವರ ಮೃತ ಪಿಎಸ್‌ಐ ಮನೆಗೆ ಭೇಟಿ ನೀಡುವ ಮಾಹಿತಿಯಿದೆ. ಆರೋಪಿತರನ್ನು ಬಂಧಿಸಿದ ಬಳಿಕ ಗೃಹಸಚಿವರು ಇಲ್ಲಿಗೆ ಆಗಮಿಸಬೇಕು ಎಂದು ಒತ್ತಾಯಿಸಿದರು.
ಪರಶುರಾಮ ಪ್ರಾಮಾಣಿಕ ಅಧಿಕಾರಿಯಾಗಿದ್ದು ನನ್ನ ಸಂಪರ್ಕದಲ್ಲಿದ್ದ. ಭವಿಷ್ಯದಲ್ಲಿ ಆತನು ಐಎಎಸ್ ಆಗುವ ಕನಸುಹೊಂದಿದ್ದ. ಈ ದುಷ್ಟ ಜಾತಿವಾದಿ ಸಮಾಜ ಅದಕ್ಕೆ ಅವಕಾಶ ಕೊಡಲಿಲ್ಲ. ಪಿಎಸ್‌ಐ ಪರಶುರಾಮ ಹಿಂದೊಮ್ಮೆ ನನ್ನ ಬಳಿ ಶಾಸಕ ಚನ್ನಾರೆಡ್ಡಿಗೆ ಪತ್ನಿಯ ಬಂಗಾರ ಅಡವಿಟ್ಟು 20ಲಕ್ಷ ರೂ.ಗಳನ್ನು ನೀಡಿ ಪೋಸ್ಟಿಂಗ್ ಪಡೆದಿದ್ದೇನೆಂದು ಹೇಳಿಕೊಂಡಿದ್ದ. ಆಗಲೇ ಆತನಿಗೆ ತಿಳಿವಳಿಕೆ ನೀಡಿ ಭವಿಷ್ಯದಲ್ಲಿ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ಸುಮ್ಮನಿದ್ದೆ. ಅವಧಿಪೂರ್ಣಗೊಳಿಸಲು ತಂದೆ-ಮಗ ಮತ್ತೊಮ್ಮೆ 30ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ನೀಡದಿದ್ದಕ್ಕೆ ಕೇಳಜಾತಿಯವರು ತಮ್ಮ ಕ್ಷೇತ್ರದಲ್ಲಿ ಇರುವುದಬೇಡವೆಂದು ನಿಂದಿಸಿದ್ದಾರೆ. ಈ ಬೆಳವಣಿಗೆ ನನ್ನ ಗಮನಕ್ಕೆ ತಂದಿದ್ದರೆ ಶಾಸಕರಿಗೆ ತಕ್ಕ ಪಾಠ ಕಲಿಸುತ್ತಿದ್ದೇವು. ಇದಾವುದನ್ನು ಪರಶುರಾಮ ನನ್ನ ಗಮನಕ್ಕೆ ತರಲಿಲ್ಲ. ಪ್ರಾಮಾಣಿಕ, ಯುವಅಧಿಕಾರಿಯನ್ನು ಕಳೆದುಕೊಂಡಿದ್ದೇವೆಂದು ಕಳವಳ ವ್ಯಕ್ತಪಡಿಸಿದರು.
ದಂಧೆ ನಡೆಸದಿರಲು ಸಾಧ್ಯವಿಲ್ಲವೇ?: ಎಲ್ಲಾ ಪಕ್ಷಗಳ ಶಾಸಕರು ವರ್ಗಾವಣೆ ದಂಧೆ ನಡೆಸದೇ ಬದುಕಲು ಸಾಧ್ಯವಿಲ್ಲವೇ. ಮನುಷ್ಯ ಮೂಲದಲ್ಲಿಯೇ ಭ್ರಷ್ಟನಾಗಿದ್ದಾನೆ. ಮುಖ್ಯಮಂತ್ರಿ ಆದಿಯಾಗಿ ಪ್ರತಿಯೊಬ್ಬರೂ ಲೆಟರ್‌ಹೆಡ್ ಸಂಸ್ಕೃತಿಯನ್ನು ಕೊನೆಗಾಣಿಸಬೇಕು. ಅಂದಾಗ ಮಾತ್ರ ಅಧಿಕಾರಿಗಳು ಒತ್ತಡರಹಿತವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಇಲ್ಲವೆಂದರೆ ಅಧಿಕಾರಿಗಳು ಜನಸಾಮನ್ಯರಿಂದ ಸುಲಿಗೆಗೆ ಇಳಿಯಬೇಕಾಗುತ್ತಿದ್ದು ರಕ್ಷರೇ ಭಕ್ಷರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಕ್ಕೆ ಕರೆ: ಅಹಿಂದವೆಂದು ನಾಯಕನೆಂದು ಕರೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ದಲಿತ ಅಧಿಕಾರಿಗಳ ಮಾರಣಹೋಮ ನಡೆಯುತ್ತಿದೆ. ಪ್ರಾಮಾಣಿಕ ಅಧಿಕಾರಿ ಪರಶುರಾಮ ಕುಟುಂಬಕ್ಕೆ ನ್ಯಾಯ ದೊರಕಿಸಲು ನಾಳೆಯಿಂದ ರಾಜ್ಯದ ಎಲ್ಲಾ ದಲಿತಪರ ಸಂಘಟನೆಗಳು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕು. ಕೇಳ ಜಾತಿಯ ಅಧಿಕಾರಿಗಳು ತಮ್ಮ ಕ್ಷೇತ್ರದಲ್ಲಿರಬಾರದೆನ್ನುವ ಮನಸ್ಥಿತಿವುಳ್ಳ ಶಾಸಕರಿಗೆ ತಕ್ಕಪಾಠ ಆಗುವ ಜತೆಗೆ ಮುಂದೆ ಇಂತಹ ಪ್ರಕರಣಗಳು ಮರುಕಳುಹಿಸದಂತೆ ಸರ್ಕಾರಕ್ಕೆ ಎಚ್ಚರಿಕೆ ಆಗುವವರೆಗೂ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಸಹಾಯಧನ: ಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಮ್ಮ ಒಂದು ತಿಂಗಳ ವೇತನವನ್ನು ಮೃತ ಪಿಎಸ್‌ಐ ಪತ್ನಿ ಶ್ವೇತಾಗೆ ಚೆಕ್ ಮೂಲಕ ಧನಸಹಾಯ ನೀಡಿದರು. ಇಡೀ ಕುಟುಂಬ ಯಾವುದೇ ಕಾರಣಕ್ಕೆ ಎದೆಗುಂದುವುದು ಬೇಡ. ಕುಟುಂಬಕ್ಕೆ ಸರ್ಕಾರಿದಂದ ನ್ಯಾಯ ದೊರೆಯುವವರೆಗೂ ನಿಮ್ಮೊಂದಿಗೆ ನಾನು ಮತ್ತು ನಮ್ಮ ಪಕ್ಷವಿದೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಪೊಲೀಸರು ಪ್ರತಿನಿತ್ಯ ಸೂಲಿಗೆ ಮಾಡುತ್ತಿದ್ದಾರೆʼ
ಈ ಹಿಂದೆ ರಾಜಕಾರಣಿಗಳು ಪೊಲೀಸರ ವರ್ಗಾವಣಗೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು. ಈಗ ಹಿರಿಯ ಮತ್ತು ಕಿರಿಯ ಅಧಿಕಾರಿಗಳ ವರ್ಗಾವಣೆಯನ್ನು ಹಣ ಮಾಡುವ ದಂಧೆ ಮಾಡಿಕೊಂಡಿದ್ದಾರೆ. ಸಮವಸ್ತ್ರ ಧಾರಿ ರಕ್ಷಕನಾಗುವ ಬದಲು ಭಕ್ಷನಾಗುತ್ತಿದ್ದಾನೆ. ಹಾಗಾಗಿ ಪೊಲೀಸರು ಪ್ರತಿನಿತ್ಯವೂ ಜನಸಾಮಾನ್ಯರಿಂದ ವಸೂಲಿ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಬೇಸರ ವ್ಯಕ್ತಪಡಿಸಿದರು.
ಗೃಹ ಸಚಿವರಿಗೆ ಘೇರಾವು
ಪಿಎಸ್‌ಐ ಪರಶುರಾಮ ಸಾವಿಗೆ ಕಾರಣವಾದ ಶಾಸಕ ಚನ್ನಾರೆಡ್ಡಿ ಪಾಟೀಲ್ ತನ್ನೂರು ಮತ್ತು ಆತನ ಪುತ್ರನನ್ನು ಬಂಧನ ಮಾಡದೇ ಗೃಹ ಸಚಿವ ಜಿ.ಪರಮೇಶ್ವರ್ ನಮ್ಮ ಮನೆಗೆ ಬರುವುದು ಬೇಡ. ಒಂದು ವೇಳೆ ಬಂದಿದ್ದೇ ಆದಲ್ಲಿ ನಾವು ಅವರಿಗೆ ಘೇರಾವು ಹಾಕಬೇಕಾಗುತ್ತದೆ ಎಂದು ಮೃತ ಪಿಎಸ್‌ಐ ತಂದೆ ಜನಕಮುನಿ ಮತ್ತು ಸಹೋದರ ಮಹಾದೇವಪ್ಪ ಆಗ್ರಹ ವ್ಯಕ್ತಪಡಿಸಿದರು.