

ಕಡೂರು: ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಶಿಕ್ಷಕರು ಶಾಲೆಯನ್ನು ಅಂದಗಾಣಿಸುತ್ತಿದ್ದಾರೆ. ಶಾಲೆ ಗೋಡೆಗೆ ರೈಲಿನಂತೆ ಚಿತ್ರ ಬಿಡಿಸಿ ಆಕರ್ಷಣೀಯವಾಗಿಸುತ್ತಾರೆ. ಗಿಡಗಳನ್ನು ಬೆಳೆಸಿ ಪರಿಸರಸ್ನೇಹಿಯಾಗಿಸುತ್ತಾರೆ. ಇಂತಹ ಪ್ರಯೋಗ ವೈ.ಸಿದ್ದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಬೀರೂರು ಶೈಕ್ಷಣಿಕ ವ್ಯಾಪ್ತಿಗೆ ಒಳಪಡುವ ಎಮ್ಮೆದೊಡ್ಡಿ ಸಮೀಪದ ವೈ.ಸಿದ್ದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮುಖ್ಯಶಿಕ್ಷಕ ಸಿದ್ದಪ್ಪ ಮತ್ತು ಸಹ ಶಿಕ್ಷಕರ ಪರಿಶ್ರಮದ ಫಲವಾಗಿ ನಾನಾ ಬಗೆಯ ಹೂವಿನ-ಹಣ್ಣಿನ ಗಿಡ, ಮರಗಳನ್ನು ಬೆಳೆಸಿದ್ದು ಶಾಲೆ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ.
ಸರ್ಕಾರಿ ಶಾಲೆ ಕಳೆದ ಎರಡು ವರ್ಷದವರೆಗೆ ಶಿಥಿಲಾವಸ್ಥೆಯಿಂದ ಕೂಡಿತ್ತು. ದ್ವೀಪದಂತಿರುವ ಗ್ರಾಮದ ಶಾಲೆಗೆ ಬೆರಳೆಣಿಕೆ ಮಕ್ಕಳು ಬರುತ್ತಿದ್ದರು. ಇದೀಗ ಶಾಲೆ ಪರಿಸರದ ಸೌಂದರ್ಯ ಹೆಚ್ಚಿದಂತೆ ಐದು ವರ್ಷಗಳಿಂದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ವರ್ಷ 49 ಮಕ್ಕಳು ದಾಖಲಾತಿ ಹೊಂದಿದ್ದಾರೆ.
ಮುಖ್ಯಶಿಕ್ಷಕ ಸಿದ್ದಪ್ಪ ಅವರು ಶಾಲೆಗೆ ಹೊಸ ರೂಪ ನೀಡಲು ಆಸಕ್ತಿ ವಹಿಸಿದರು. ಲಾಕ್ಡೌನ್ ವೇಳೆ ಎಸ್ಡಿಎಂಸಿ, ಸಹ ಶಿಕ್ಷಕರ ಜತೆಗೂಡಿ ಶಾಲೆ ಆವರಣದಲ್ಲಿ ಹೂವು, ಹಣ್ಣಿನ ಗಿಡಗಳನ್ನು ಬೆಳೆಸಿದರು. ಗ್ರಾಮಸ್ಥರ ಸಹಕಾರದಿಂದ ಕಾಂಪೌಂಡ್ ನಿರ್ವಿುಸಿದರು. ಮಕ್ಕಳನ್ನು ಆಕರ್ಷಿಸುವಂತೆ ಗೋಡೆಯಲ್ಲಿ ನಲಿಕಲಿ ಎಕ್ಸ್ಪ್ರೆಸ್ ಕೆಎಸ್ಆರ್ಟಿಸಿ ಬಸ್ನಂತೆ ಭಾಸವಾಗುವ ರೀತಿಯಲ್ಲಿ ಚಿತ್ರ ಬಿಡಿಸಿ ಮೆರುಗು ನೀಡಿದರು.
ಶಾಲೆಗೆ ಅನೇಕರು ಕೊಡುಗೆ ನೀಡಿದ್ದಾರೆ. ಎಮ್ಮೆದೊಡ್ಡಿ ಗ್ರಾಪಂ ಅಧ್ಯಕ್ಷೆ ಶೋಭಾ ರವಿಕುಮಾರ್ ಮಕ್ಕಳ ಬಿಸಿಯೂಟಕ್ಕೆ ಅನುಕೂಲವಾಗಲು ತಟ್ಟೆ ಮತ್ತು ಲೋಟಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಒಟ್ಟಿನಲ್ಲಿ ಶಾಲೆಗೆ ಹೊಸ ಕಳೆ ಬಂದಿದ್ದು, ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗುವಂತಾಗಿದೆ.
ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಪ್ರಯತ್ನ: ಮೂರು ವರ್ಷಗಳಿಂದ ಪ್ರತಿ ತಿಂಗಳು ಶಿಕ್ಷಕರು ಹಾಗೂ ಮಕ್ಕಳ ಲೇಖನಗಳನ್ನು ಸಂಗ್ರಹಿಸಿ ‘ಮದಗ’ ಮಾಸ ಪತ್ರಿಕೆ ಹೊರತರುತ್ತಿದ್ದಾರೆ. ನಮ್ಮೂರ ಶಾಲೆ ವೈ.ಸಿದ್ದರಹಳ್ಳಿ ಎಂಬ ವಾಟ್ಸ್ಆಪ್ ಗ್ರೂಪ್ ರಚಿಸಿಕೊಂಡು ಮಕ್ಕಳು ಮತ್ತು ಪಾಲಕರೊಂದಿಗೆ ಸಂಪರ್ಕ ಸಾಧಿಸಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಶಾಲೆಯಲ್ಲಿ ವಿದ್ಯಾನಿಧಿ ಸ್ಥಾಪಿಸಿ ಹಳೇ ವಿದ್ಯಾರ್ಥಿಗಳು ನೀಡುವ ಹಣವನ್ನು ಹುಂಡಿಗೆ ಹಾಕುವ ಮೂಲಕ ಒಂದೇ ವರ್ಷಕ್ಕೆ ಐದು ಸಾವಿರ ರೂ. ಸಂಗ್ರಹಿಸಿದ್ದು, ಶಾಲೆಯ ಸುಣ್ಣ-ಬಣ್ಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ.
ವಿವಿಧ ಜಾತಿಯ ಗಿಡ, ಮರ ಪೋಷಣೆ: ಮಕ್ಕಳ ಹಾಗೂ ಶಿಕ್ಷಕರ ಜನ್ಮದಿನದ ನೆನಪಿಗಾಗಿ ಗಿಡಗಳನ್ನು ನೆಡುವ ಮೂಲಕ ಹಸಿರೀಕರಣ ಮಾಡಲಾಗುತ್ತಿದೆ. ಶಾಲಾ ಪರಿಸರದ ಅಂದ ಹೆಚ್ಚಿಸಲು ಗ್ರಾಪಂ ಸಹಕಾರದಿಂದ ಕೊಳವೆಬಾವಿ ದುರಸ್ತಿಪಡಿಸಿ ಕೈತೋಟಕ್ಕೆ ನೀರು ಬಳಸಲಾಗುತ್ತಿದೆ. ಶಾಲೆ ಆವರಣದಲ್ಲಿ ಹೊಂಗೆ, ಬೇವು, ಬಾದಾಮಿ, ಗಸಗಸೆ, ಸಿಲ್ವರ್, ಸೀಬೆ, ರಾಮಫಲ, ನೇರಳೆ, ಸಪೋಟ, ತೆಂಗು, ಅಡಕೆ, ಬಾಳೆ, ಬಿದಿರು, ಕರಿಬೇವು, ನುಗ್ಗೆ, ಕ್ರೋಟನ್, ತೇಗ, ತೊಂಡೆಬಳ್ಳಿ, ಬದನೆ, ಬಸಳೆ, ಒಂದೆಲಗ ಸೇರಿ ವಿವಿಧ ಜಾತಿಯ ಗಿಡ-ಮರಗಳನ್ನು ಬೆಳೆಸಲಾಗಿದೆ.