

ಬನ್ನೂರು: ಪಟ್ಟಣದ ಸಮೀಪದ ಯಾಚೇನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ವೈ.ಕೆ.ಉಮೇಶ್ ಹಾಗೂ ಉಪಾಧ್ಯಕ್ಷರಾಗಿ ದುರ್ಗೇಶ್ ಅವಿರೋಧವಾಗಿ ಆಯ್ಕೆಯಾದರು.
12 ಸದಸ್ಯರನ್ನು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೈ.ಕೆ.ಉಮೇಶ್, ದುರ್ಗೇಶ್ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಮುಖ್ಯಚುನಾವಣಾಧಿಕಾರಿಯಾಗಿ ಪಾಲ್ಗೊಂಡಿದ್ದ ಹಸೀನಾ ಅವಿರೋಧ ಆಯ್ಕೆ ಪ್ರಕಟಿಸಿದರು.
ವೈ.ಕೆ. ಉಮೇಶ್ ಮಾತನಾಡಿ, ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮದಲ್ಲಿನ ಸಹಕಾರ ಸಂಘವನ್ನು ಉತ್ತಮಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಮಾತನಾಡಿ, ಗ್ರಾಮದ ಅಭಿವೃದ್ಧಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘ ಎರಡು ಒಂದೇ ನಾಣ್ಯದ ಎರಡು ಮುಖಗಳಂತೆ ಇದ್ದು, ಇವೆರಡರಲ್ಲೂ ಆಯ್ಕೆಯಾಗುವ ಸದಸ್ಯರ ಸಹಕಾರದಿಂದ ಅಭಿವೃದ್ಧಿಯ ಹಾದಿಯಲ್ಲಿದೆ. ಮುಂದಿನ ದಿನಗಳಲ್ಲೂ ಮತ್ತಷ್ಟು ಅಭಿವೃದ್ಧಿ ಮಾಡುವ, ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕಾರ್ಯವನ್ನು ರೂಪಿಸುವ ಕೆಲಸ ಮಾಡುವುದಾಗಿ ಅವರು ತಿಳಿಸಿದರು.
ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು, ಗ್ರಾಮಸ್ಥರು ಮುಖಂಡರು ಇದ್ದರು.