

ಮಂಗಳೂರು : ಕ್ರಿಸ್‌ಮಸ್ ಪ್ರೀತಿ ಮತ್ತು ಶಾಂತಿಯ ಸಂದೇಶವಾಗಿದೆ. ಆಶ್ರಮದಲ್ಲಿರುವ ವೃದ್ಧರು, ರೋಗಿಗಳು, ಜನರಿಗೆ ನಿಮ್ಮ ಸಮಯವನ್ನು ಉಡುಗೊರೆಯಾಗಿ ನೀಡಿ. ಅಂತಹ ಜನರೊಂದಿಗೆ ಸ್ವಲ್ಪ ಸಮಯ ಕಳೆಯುವುದು ದೊಡ್ಡ ಕೊಡುಗೆಯಾಗಿದೆ ಎಂದು ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾ ಹೇಳಿದರು.
ಆಲ್ ಕರ್ನಾಟಕ ಯುನೈಟಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಪಶ್ಚಿಮ ವಲಯ ಹಾಗೂ ಮ್ಯಾಂಗಲೋರ್ ಕ್ರಿಶ್ಚಿಯನ್ ಕೌನ್ಸಿಲ್ ವತಿಯಿಂದ ನಗರದ ಕಾಸ್ಸಿಯಾ ಮೋರ್ಗನ್ಸ್‌ಗೇಟ್ ಚರ್ಚ್ ಸಭಾಂಗಣದಲ್ಲಿ ನಡೆದ ಕ್ರೈಸ್ತ ಐಕ್ಯತೆಯ ಕ್ರಿಸ್‌ಮಸ್ ಸೌಹಾರ್ದ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಕ್ಷೇತ್ರದ ಬಿಷಪ್ ಹೇಮಚಂದ್ರ ಕುಮಾರ್ ಮಾತನಾಡಿ ಸೌಹಾರ್ದತೆ ಎಲ್ಲ ಜನರೊಡನೆ ಸದಾ ನಡೆಯಲಿ. ಒರ್ಥೊಡೊಕ್ಸ್ ಸಿರಿಯನ್ ಚರ್ಚ್ ಬ್ರಹ್ಮಾವರ ಧರ್ಮಕ್ಷೇತ್ರದ ಬಿಷಪ್ ಯಾಕುಬ್ ಮಾರ್ ಎಲಿಯಾಸ್ ಹಾಗು ಪುತ್ತೂರು ಸಿರೋ ಮಲಂಕರ ಧರ್ಮಕ್ಷೇತ್ರದ ಬಿಷಪ್ ಅತೀಗೀವರ್ಗೀಸ್ ಮಾರ್ ಮಕಾರಿಯೊಸ್ ಆಶೀರ್ವಚನ ನೀಡಿದರು.
ಫಾ.ಚಾರ್ಲ್ಸ್ ಎಸ್.ಪ್ರಾರ್ಥನಾ ವಿಧಿ ನೆರವೇರಿಸಿದರು. ಮಂಗಳೂರು ಧರ್ಮಕ್ಷೇತ್ರದ ವಿಕಾರ್ ಜನರಲ್ ಫಾ.ಮ್ಯಾಕ್ಸಿಮ್ ನೊರೋನ್ಹಾ, ಸಿ.ಲಿಲ್ಲಿ ಪಿರೇರ, ಸಿ.ಲೀನಾ, ಫಾ.ಎರಿಕ್ ಕ್ರಾಸ್ತಾ ಉಪಸ್ಥಿತರಿದ್ದರು.
ರೆಮೋನಾ ಪಿರೇರಾ ಇವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ಅನಿಲ್ ಡೇಸಾ ಹಾಗೂ ತೆರೆಜಾ
ಪಿರೇರ ಕಾರ್ಯಕ್ರಮ ನಿರೂಪಿಸಿದರು.