

ಕುಶಾಲನಗರ:
ಭಾರತೀಯ ಸೇನೆಯಲ್ಲಿ ಸುದೀರ್ಘ ಮೂವತ್ತು ವರ್ಷ ಸೇವೆ ಸಲ್ಲಿಸಿ ಜೂ.30 ರಂದು ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ಯೋಧ ಎಚ್.ಎಸ್. ಕೃಷ್ಣಪ್ಪ ಅವರಿಗೆ ಹೆಬ್ಬಾಲೆ ಗ್ರಾಮಸ್ಥದಲ್ಲಿ ಬುಧವಾರ ಅದ್ದೂರಿ ಸ್ವಾಗತ ನೀಡಲಾಯಿತು. ಚೆನ್ನೈನಿಂದ ಊರಿಗೆ ಮರಳಿದ ಯೋಧ ಕೃಷ್ಣಪ್ಪ ಅವರ ಕುಟುಂಬಸ್ಥರ ಮೇಲೆ ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಅಭಿಮಾನಿಗಳು ಪುಷ್ಪ ಮಳೆಗೆರೆದರು.
ಹೆಬ್ಬಾಲೆ ಗ್ರಾಮಸ್ಥರು, ಕೃಷ್ಣಪ್ಪ ಗೆಳೆಯರ ಬಳಗ ಹಾಗೂ ಕೃಷ್ಣಪ್ಪ ಅಭಿಮಾನಿಗಳು ವೀರಯೋಧ ಕೃಷ್ಣಪ್ಪ ಅವರ ಕುಟುಂಬವನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು. ಅಭಿಮಾನಿಗಳು ಬೃಹತ್ ಹೂವಿನ ಹಾರಗಳನ್ನು ಹಾಕಿ ಗೌರವ ಸಲ್ಲಿಸಿದರು. ಇದೇ ವೇಳೆ ಯೋಧ ಹಾಗೂ ದೇಶದ ಪರವಾಗಿ ಘೋಷಣೆ ಕೂಗಲಾಯಿತು. ಅಭಿಮಾನಿಗಳು ಹೆಬ್ಬಾಲೆ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಅಲಂಕೃತ ವಾಹನದಲ್ಲಿ ಮೆರವಣಿಗೆ : ಹೆ ಬ್ಬಾಲೆ ಗ್ರಾಮದ ಸಿದ್ದಪ್ಪ ಹಾಗೂ ದಿ.ಪುಟ್ಟಗೌರಮ್ಮ ದಂಪತಿಗಳ ಕಿರಿಯ ಪುತ್ರ ಕೃಷ್ಣಪ್ಪ ದಂಪತಿಯನ್ನು ಗ್ರಾಮದ ಮುಖ್ಯ ಸರ್ಕಲ್ ನಿಂದ ಊರಿನ ಪ್ರಮುಖ ಬೀದಿಯಲ್ಲಿ ಮಂಗಳವಾದ್ಯಗಳೊಂದಿಗೆ ಅಲಂಕೃತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಉದ್ದಕ್ಕೂ ಅಭಿಮಾನಿಗಖು ಜಯಘೋಷ ಹಾಕಿದರು. ನಂತರ ತಮ್ಮ ಮನೆಗೆ ಆಗಮಿಸಿದಾಗ ಮನೆಯವರು ಮಂಗಳಾರತಿಯೊಂದಿಗೆ ಯೋಧರ ಕುಟುಂಬವನ್ನು ಬರಮಾಡಿಕೊಂಡರು.
ಶಾಲಾ ಮಕ್ಕಳಿಗೆ ಟೀಶರ್ಟ್ ವಿತರಣೆ :
ಹೆಬ್ಬಾಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನಿವೃತ್ತ ಯೋಧ ಕೃಷ್ಣಪ್ಪ ಹಾಗೂ ಪೂರ್ಣಿಮಾಕೃಷ್ಣಪ್ಪ ಉಚಿತವಾಗಿ ಟೀಶರ್ಟ್ ವಿತರಣೆ ಮಾಡಿದರು. ತವರಿಗೆ ಆಗಮಿಸಿದ ಯೋಧ ಮೊದಲು ತಾನು ವಿದ್ಯಾಭ್ಯಾಸ ಮಾಡಿದ ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭ ಶಾಲಾ ಮಕ್ಕಳು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಟೀಶರ್ಟ್ ವಿತರಣೆ ಮಾಡಲಾಯಿತು. ನಂತರ ಗುರುಗಳಾದ ಎಚ್.ಎನ್. ನಾಗಾಚಾರಿ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಚ್.ಎಂ. ವೆಂಕಟೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಯೋಧ ಕೃಷ್ಣಪ್ಪ ಅವರನ್ನು ಸನ್ಮಾನಿಸಿದರು.ನಂತರ ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು.
ಈ ಸಂದರ್ಭ ಯೋಧ ಕೃಷ್ಣಪ್ಪ ಅಭಿಮಾನಿ ಬಳಗದ ಎಚ್.ಎಲ್. ರಮೇಶ್, ಎಚ್.ಆರ್. ಶ್ರೀನಿವಾಸ್, ಲೋಕೇಶ್, ಮಾದೇಶ, ಕಾಸರಗೋಡು ಬೀದಿ ರಮೇಶ್, ವಿಶ್ವನಾಥ್, ರಘು, ಯೋಗೇಶ್ ಮತ್ತಿತರರು ಇದ್ದರು.