

ತುಮಕೂರು : ರಾಜ್ಯದ ಮೊದಲ ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಶೀಘ್ರ ಅಡಿಗಲ್ಲು ಬೀಳಲಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ ತೇಲುವ ಸೌರ ವಿದ್ಯುತ್ ಉತ್ಪಾದನೆ ಘಟಕ ನಿರ್ಮಿಸಲು ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಯೋಜನೆ ಸಿದ್ಧಪಡಿಸಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ಸ್ಮಾರ್ಟ್‌ಸಿಟಿ ಸಂಸ್ಥೆಯು ವಿಶೇಷ ವಿನ್ಯಾಸದ ಘಟಕ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಯು ಸೋಲಾರ್ ಕ್ಲೀನ್ ಎನರ್ಜಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಈ ಯೋಜನೆ ನಿರ್ಮಾಣ ಕಾಮಗಾರಿ ಪಡೆದುಕೊಂಡಿದೆ.
25 ವರ್ಷ ಒಡಂಬಡಿಕೆ: 600 ಎಕರೆ ಪ್ರದೇಶವಿರುವ ಬುಗಡನಹಳ್ಳಿ ಜಲಸಂಗ್ರಹಾಗಾರದ 60 ಎಕರೆ ಪ್ರದೇಶದಲ್ಲಿ ಸೌರ ಫಲಕಗಳನ್ನು ಅಳವಡಿಸುವ ಯೋಜನೆಯ ಒಟ್ಟು ಮೊತ್ತ ಅಂದಾಜು 97.8 ಕೋಟಿ ರೂ., ಗಳಾಗಿದೆ. ಮಹಾನಗರ ಪಾಲಿಕೆ ಜತೆಗೆ ಯು ಸೋಲಾರ್ ಕ್ಲೀನ್ ಎನರ್ಜಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ 25 ವರ್ಷಗಳ ಒಡಂಬಡಿಕೆ ಮಾಡಿಕೊಳ್ಳಲಿದ್ದು ಸೌರವಿದ್ಯುತ್ ಉತ್ಪಾದನೆ, ನಿರ್ವಹಣೆ ಹೊಣೆ ನಿರ್ವಹಿಸಲಿದೆ. ಇದರಿಂದ ಪಾಲಿಕೆಗೆ ವಾರ್ಷಿಕ 2.5 ಕೋಟಿ ರೂ. ವಿದ್ಯುತ್ ಬಿಲ್ ಉಳಿತಾಯ ಆಗಲಿದೆ.
ಒಂದು ಯೂನಿಟ್‌ಗೆ 4.1 ರೂ., !: 97.8 ಕೋಟಿ ರೂ. ವೆಚ್ಚದಲ್ಲಿ 20 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೌರ ಘಟಕ ಇದಾಗಿದ್ದು ಎಒಯು ನಂತೆ ಪ್ರತೀ ಯೂನಿಟ್‌ಗೆ 4.1 ರೂ.ಗಳನ್ನು ಯು ಸೋಲಾರ್ ಕ್ಲೀನ್ ಎನರ್ಜಿ ಸಂಸ್ಥೆಗೆ ಪಾಲಿಕೆ ಪಾವತಿಸಲಿದೆ. ಈ ಯೋಜನೆಯಿಂದ ಪಾಲಿಕೆಗೆ ಪ್ರತೀ ತಿಂಗಳು 19 ಲಕ್ಷ ರೂ., ವಿದ್ಯುತ್ ಬಿಲ್ ಭಾರ ಕಡಿತವಾಗಲಿದೆ.
ಖಾಸಗಿ ಸಹಭಾಗಿತ್ವದಡಿ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ನವೀಕರಿಸಬಹುದಾದ ಇಂಧನ, ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ), ಬೆಸ್ಕಾಂ, ಕೆಪಿಟಿಸಿಎಲ್‌ಗೆ ಅನುಮತಿಗೆ ಕೋರಲಾಗಿದೆ. ಯು ಸೋಲಾರ್ ಕ್ಲೀನ್ ಎನರ್ಜಿ ಸಲ್ಯೂಷನ್ಸ್ ಲಿಮಿಟೆಡ್ ವತಿಯಿಂದ ಡಿಪಿಆರ್ ಸಿದ್ಧಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸುತ್ತಿದ್ದಂತೆ ಯೋಜನೆಗೆ ಚಾಲನೆ ದೊರೆಯಲಿದೆ.
65 ಕೋಟಿ ಲೀಟರ್ ನೀರು ಉಳಿತಾಯ : ಮಹಾನಗರ ಪಾಲಿಕೆ ಒಡೆತನದ ಬುಗಡನಹಳ್ಳಿ ಜಲಸಂಗ್ರಹಾಗಾರದ ಮೇಲೆ ಫೋಟೋವೋಲ್ಟಾಯಿಕ್ ಫಲಕಗಳನ್ನು ಅಳವಡಿಸಲಾಗುತ್ತದೆ. ಸೌರ ವಿದ್ಯುತ್ ಉತ್ಪಾದನೆ ಜತೆಗೆ 65 ಕೋಟಿ ಲೀಟರ್ ನೀರು ಆವಿಯಾಗುವುದನ್ನು ತಗ್ಗಿಸಬಹುದಾಗಿದೆ. 3.66 ಕೋಟಿ ವಿದ್ಯುತ್ ಯೂನಿಟ್ ಬಳಕೆಯಲ್ಲಿ ಶೇ.80 ಉಳಿತಾಯ ಮಾಡಬಹುದಾಗಿದೆ.
ತೇಲುವ ಸೌರ ಘಟಕ * ಯು ಸೋಲಾರ್ ಕ್ಲೀನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಜತೆ ಒಡಂಬಡಿಕೆ * 20 ಮೆಗಾವಾಟ್ ಸಾಮರ್ಥ್ಯದ ತೇಲುವ ಸೌರ ಘಟಕ * 60 ಎಕರೆ ಪ್ರದೇಶದಲ್ಲಿ ಸೌರ ಫಲಕಗಳ ಅಳವಡಿಕೆ * ಜಲಸಂಗ್ರಹಾಗಾರದ ನೀರು ಆವಿಯಾಗುವುದನ್ನು ತಗ್ಗಿಸಬಹುದು * ವಾರ್ಷಿಕ 2.5 ಕೋಟಿ ವಿದ್ಯುತ್ ಬಿಲ್ ಉಳಿತಾಯ ಗೊಂಡಿದೆ. ಇದೊಂದು ವಿಶಿಷ್ಟ ಹಾಗೂ ರಾಜ್ಯದಲ್ಲೇ ಮೊದಲ ಘಟಕ ಎನಿಸಲಿದೆ. 20 ಮೆಗಾವಾಟ್ ಸಾಮರ್ಥ್ಯದ ಈ ಘಟಕ ನಿರ್ಮಾಣವು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದ್ದು, ಪಾಲಿಕೆಯಿಂದ ನಯಾಪೈಸೆ ಕೊಡುವಂತಿಲ್ಲ. ಸರ್ಕಾರದ ಅಧಿಸೂಚನೆ ಹೊರಬೀಳುತ್ತಿದ್ದಂತೆ ತೇಲುವ ಸೌರ ಘಟಕ ನಿರ್ಮಾಣ ಆರಂಭವಾಗಲಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ