

ಬೆಳಗಾವಿ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ, ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದರಿಂದ ಹಳೆ ಗೋಕಾಕ ನಗರ ಪ್ರವಾಹದಿಂದ ತತ್ತರಿಸಿದೆ.
ನಗರದ ಹಳೆದನಗಳ ಪೇಟೆ, ಕುಂಬಾರ ಓಣಿ, ಉಪ್ಪಾರ ಓಣಿ, ಭೋಜಗಾರ ಓಣಿ ಸೇರಿ ಘಟಪ್ರಭಾ ನದಿ ತಟದಲ್ಲಿರುವ ರೈತರಿಗೆ,ಕಾರ್ಮಿಕರಿಗೆ ದನ-ಕರುಗಳನ್ನು ತಗೆದುಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ..
ಈಗಾಗಲೇ ಹಿಡಕಲ್ ಜಲಾಶಯದಿಂದ 30 ಸಾವಿರ ಕ್ಯುಸೆಕ್ ಮತ್ತು ಶಿರೂರು ಜಲಾಯಶದಿಂದ ಹೆಚ್ಚುವರಿಯಾಗಿ 10 ಸಾವಿರ ಕ್ಯೂಸೆಕ್ ನೀರನ್ನು ನದಿಗಳಿಗೆ ಹರಿ ಬಿಟ್ಟಿರುವ ಪರಿಣಾಮ ಗೋಕಾಕ ನಗರ ಮತ್ತು ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗುವ ಭೀತಿ ಅಧಿಕವಾಗಿದೆ.
ಈಗಾಗಲೇ ಗೋಕಾಕ ನಗರದ ಸರ್ಕಾರಿ ಕಾಲೇಜಿನಲ್ಲಿ ಆರಂಭಿಸುವ ಕಾಳಜಿ ಕೇಂದ್ರಕ್ಕೆ 50ಕ್ಕೂ ಅಧಿಕ ಕುಟುಂಬಗಳು ಸ್ಥಳಾಂತರಗೊಂಡಿವೆ.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಪಂ ಸಿಇಒ ರಾಹುಲ ಶಿಂಧೆ ನೇತೃತ್ವದಲ್ಲಿ ಅಧಿಕಾರಿಗಳು ಬುಧವಾರ ಪ್ರವಾಹ ಪೀಡಿತ ಗೋಕಾಕ ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.