

ವಿಜಯವಾಣಿ ಸುದ್ದಿಜಾಲ ಉಡುಪಿ
ನಗರದಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವ ಮೂಲಕ ಕಿಡಿಗೇಡಿಗಳಿಗೆ ಅಂಕುಶ ಹಾಕಬೇಕಿದೆ.
ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಇಲಾಖೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೂ ಕೆಲವು ವಾಹನ ಚಾಲಕರು ಲೆಕ್ಕಿಸುತ್ತಿಲ್ಲ. ಪೊಲೀಸರು ಇಲ್ಲದ ಇರುವ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಿಂದ ಸಂಚರಿಸುವ ವಾಹನಗಳ ಸಂಖ್ಯೆ ಅಧಿಕವಿದೆ. ಸರಿಯಾದ ದಿಕ್ಕಿನಲ್ಲಿ ವಾಹನ ಚಲಾಯಿಸುವವರಿಗೆ ಗೊಂದಲಗಳು ಉಂಟಾಗುತ್ತಿವೆ.
ಗುಂಡಿಬೈಲು ರಸ್ತೆಯೇ ಪರಭಾರೆ: ಕಲ್ಸಂಕದಿಂದ ಅಂಬಾಗಿಲು ಸಂಪರ್ಕಿಸುವ ಚತುಷ್ಪಥ ರಸ್ತೆಯಲ್ಲಿ ಅಡ್ಕದಕಟ್ಟೆವರೆಗೆ ಸುಮಾರು 2 ಕಿಮೀ ರಸ್ತೆ ಎಡಬದಿ ಪೂರ್ತಿ ಅನಧಿಕೃತ ವ್ಯಾಪಾರಿಗಳಿಂದ ತುಂಬಿದೆ. ಡಿಮಾರ್ಟ್ ಮುಂಭಾಗದಲ್ಲಿ ಸಂಚರವೇ ಅಸಾಧ್ಯವಾಗಿದೆ. ಇಲ್ಲಿಯೂ ವಿರುದ್ಧ ದಿಕ್ಕಿನಲ್ಲೇ ವಾಹನ ಸವಾರರು ಸಂಚರಿಸುತ್ತಿದ್ದು, ರಸ್ತೆಯು ಖಾಸಗಿಗೆ ಪರಭಾರೆಯಾಗಿರುವ ಶಂಕೆ ವ್ಯಕ್ತವಾಗಿದೆ.
ವಾಹನ ಸವಾರರಿಗೆ ಗೊಂದಲ: ವಾಹನಗಳು ತೀರಾ ಎಡಭಾಗದಲ್ಲಿ ಸಂಚರಿಸುವ ವೇಳೆ ಏಕಾಏಕಿ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಆಗಮಿಸುವ ಕಾರಣ ವಾಹನ ಸವಾರರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಇದೇ ಕಾರಣಕ್ಕೆ ನಿತ್ಯವೂ ಇಲ್ಲಿ ಅಪಘಾತಗಳು ಮಾಮೂಲಾಗಿದ್ದು, ರಾತ್ರಿ ವೇಳೆ ಸಂಚರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಪೊಲೀಸರು ಈ ಭಾಗದಲ್ಲಿ ಹೆಚ್ಚು ಇಲ್ಲದ ಕಾರಣ ಸಂಚಾರ ನಿಯಮ ಉಲ್ಲಂಘನೆಗೆ ದಾರಿಯಾಗಿದೆ. ಬಹುತೇಕ ಕಡೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಗೊಳ್ಳುತ್ತಲೇ ಇದ್ದು, ಟ್ರಾಫಿಕ್, ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಇನ್ನಾದರೂ ಕಠಿಣ ಕ್ರಮಕೈಗೊಂಡು ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಣಿಪಾಲದ ಸಿಂಡಿಕೇಟ್ ಸರ್ಕಲ್ನಿಂದ ಲಕ್ಷ್ಮೀಂದ್ರನಗರ, ಶಾರದಾ ಕಲ್ಯಾಣ ಮಂಟಪದಿಂದ ಕುಂಜಿಬೆಟ್ಟು ಹೆದ್ದಾರಿ, ಬಡಗುಪೇಟೆಯಿಂದ ಕಲ್ಸಂಕ ರಸ್ತೆ, ಶಿರಿಬೀಡು ಸರ್ಕಲ್, ಬನ್ನಂಜೆ, ಮಠದಬೆಟ್ಟು ಪರಿಸರ, ಉಡುಪಿ ಮೀನು ಮಾರುಕಟ್ಟೆಯಿಂದ ಡಯನಾ ಸರ್ಕಲ್, ಮಿಷನ್ ಕಾಂಪೌಂಡ್ನಿಂದ ಜೋಡುಕಟ್ಟೆ, ಅಜ್ಜರಕಾಡು ಪುರಭವನ ಬಳಿ, ಸಿಟಿ ಬಸ್ ತಂಗುದಾಣ ಅಶ್ವಥಕಟ್ಟೆಯಿಂದ ಕಿದಿಯೂರು ಹೊಟೇಲ್ ಸಂಪರ್ಕ ರಸ್ತೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ರಾಂಗ್ ಸೈಡಿನಿಂದ ಬಂದು ಅಪಘಾತವಾಗಿರುವ ಪ್ರಕರಣಗಳ ಬಗ್ಗೆ ವರದಿ ತರಿಸಿಕೊಂಡು ಕ್ರಮಕೈಗೊಳ್ಳಲಾಗುವುದು. ಡಾ.ಕೆ.ಅರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ https://www.vijayavani.net/the-work-of-the-cyclone-shelter-is-commendable https://www.vijayavani.net/nayari-society-cultural-celebration-kalarava