

ಬೆಳಗಾವಿ: ಹೆಸರಿಗೆ ಮಾತ್ರ ಸ್ಮಾರ್ಟ್‌ಸಿಟಿ ಎಂಬಂತಾಗಿರುವ ಬೆಳಗಾವಿ ನಗರದ ಕೆಲ ರಸ್ತೆಗಳಲ್ಲಿ ಗುಂಡಿ ತಪ್ಪಿಸಿ ದಾಟುವಷ್ಟರಲ್ಲಿ ಎಂಟೆದೆಯ ಸವಾರರು ಕೂಡ ಏದುಸಿರು ಬಿಡುತ್ತಿದ್ದು, ಹರಿದು ಹಂಚಿಹೋದಂತೆ ಭಾಸವಾಗುವ ರೋಡ್ ರಿಪೇರಿ ಮಾಡದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮಹಾನಗರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ವಾಹನ ಸವಾರರು ಮಾತ್ರವಲ್ಲ, ಪಾದಚಾರಿಗಳೂ ಸರ್ಕಸ್ ಮಾಡುತ್ತಲೇ ರಸ್ತೆಯಲ್ಲಿ ಸಂಚರಿಸಬೇಕಿದೆ. ಇಲ್ಲಿನ ಗಾಂಧಿ ನಗರಕ್ಕೆ ಹೊಂದಿಕೊಂಡಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಹೆಜ್ಜೆಗೊಂದರಂತೆ ಹೊಂಡಗಳು ನಿರ್ಮಾಣವಾಗಿವೆ. ಅಲ್ಲದೆ, ನೆಹರು ನಗರ, ಶಹಾಪುರ, ಎಪಿಎಂಸಿ ಯಾರ್ಡ್ ಸೇರಿ ಕೆಲ ಭಾಗದ ರಸ್ತೆಗಳಲ್ಲಿ ಬೃಹತ್ ಹೊಂಡ ಬಿದ್ದಿವೆ. ಹಲವು ಕಡೆಗಳಲ್ಲಿ ವಾಹನದಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿಯಿದೆ. ರಾತ್ರಿ ಸಮಯದಲ್ಲಿ ಸಂಚರಿಸಲು ಸವಾರರು ಹರಸಾಹಸ ಪಡಬೇಕಾಗಿದೆ.
ಕಳೆದ ನಾಲ್ಕೈದು ವಾರಗಳಲ್ಲಿ ಸುರಿದ ಮಳೆ ರಸ್ತೆಗಳನ್ನು ಹದಗೆಡಿಸಿದರೆ ಮತ್ತೊಂದೆಡೆ ಚರಂಡಿ, ಪೈಪ್‌ಲೈನ್ ದುರಸ್ತಿ ಕಾಮಗಾರಿಗಳಿಂದಾಗಿ ರಸ್ತೆಗಳು ಪ್ರಯಾಣಕ್ಕೆ ದುಸ್ತರವಾಗಿವೆ. ಹೊಂಡಮಯ ರಸ್ತೆಯಿಂದಾಗಿ ನಿತ್ಯ ನಗರದಲ್ಲಿ ಸಂಚರಿಸುವ ಎಲ್ಲರೂ ಯಾತನೆ ಅನುಭವಿಸುತ್ತಿದ್ದಾರೆ. ಕಾರು, ಆಟೋ ಸೇರಿ ಸಣ್ಣ ವಾಹನಗಳು ಈ ರಸ್ತೆಯಲ್ಲಿ ಚಲಿಸುವುದು ಹರಸಾಹಸವಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇಂಜಿನಿಯರ್‌ಗಳ ಗಮನಕ್ಕೆ ತಂದರೂ ನಯಾಪೈಸೆ ಪ್ರಯೋಜನವಾಗುತ್ತಿಲ್ಲ.
ಗಾಂಧಿನಗರ ಹೆದ್ದಾರಿ ಸರ್ವಿಸ್ ರಸ್ತೆಯನ್ನು ಅಗಲೀಕರಣಗೊಳಿಸಿ ದುರಸ್ತಿಗೊಳಿಸಬೇಕು. ಸರ್ವಿಸ್ ರಸ್ತೆಯಲ್ಲಿನ ತಗ್ಗು- ಗುಂಡಿಗಳನ್ನು ಮುಚ್ಚಲು ತಾತ್ಕಾಲಿಕ ದುರಸ್ತಿ ಬದಲಾಗಿ ಶಾಶ್ವತ ಕಾಮಗಾರಿ ಕೈಗೊಳ್ಳಲು ಕ್ರಮವಹಿಸಬೇಕು. ಗುಂಡಿ ಮಾತ್ರ ಮುಚ್ಚುತ್ತಿದ್ದಾರೆ. ಮತ್ತೆ ಜೋರಾಗಿ ಮಳೆ ಸುರಿದರೆ ರಸ್ತೆಗಳೆಲ್ಲ ಹಾಳಾಗುತ್ತವೆ. ಹಾಗಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಅಬ್ದುಲ್ ಮುಲ್ಲಾ, ಮಹಾಂತೇಶ ಇಟ್ಟಲಡಗಿ ಆಗ್ರಹಿಸಿದ್ದಾರೆ.
ಗಾಂಧಿ ನಗರದಲ್ಲಿ ಸರ್ವಿಸ್ ರಸ್ತೆ ದುರಸ್ತಿಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾಮಗಾರಿ ಈಗಾಗಲೇ ಕೈಗೊಂಡಿದ್ದಾರೆ.| ಎಸ್.ಎನ್. ಸಿದ್ದರಾಮಪ್ಪ ನಗರದ ಪೊಲೀಸ್ ಆಯುಕ್ತ